ಧ್ರುವ್, ತಿಲಕ್, ವಾಷಿಗೂ ಅರ್ಧ ಶತಕ, ಭಾರತ(ಎ) ತಂಡದ ಬೃಹತ್ ಮೊತ್ತ

ಹಂಚಿಕೊಳ್ಳಿ

ಲಿಂಕನ್
ನ್ಯೂಜಿಲೆಂಡ್(ಎ) ತಂಡದ ಎದುರು ಇಲ್ಲಿ ನಡೆದಿರುವ ನಾಲ್ಕು ದಿನಗಳ ೩ನೇ ಅನಧಿಕೃತ ಟೆಸ್ಟ್’ ಪಂದ್ಯದ ಎರಡನೇ ದಿನದಂದು ಪ್ರವಾಸಿ ಭಾರತ(ಎ) ತಂಡದ ಬ್ಯಾಟಿಂಗ್ ಬಾಲ’ ನಿರೀಕ್ಷೆಗೂ ಅಧಿಕ ಪ್ರಮಾಣದಲ್ಲಿ ಬೆಳೆಯಿತು.

ಅದರ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ನಾಯಕ ಧ್ರುವ್ ಜುರೇಲ್, ತಿಲಕ್ ವರ್ಮಾ ಹಾಗೂ ವಾಷಿಂಗ್ಟನ್ ಸುಂದರ್ ಅವರೆಲ್ಲರ ಬ್ಯಾಟ್‌ಗಳಿಂದಲೂ ಉಪಯುಕ್ತ ಅರ್ಧ ಶತಕಗಳು ಹರಿದು ಬರುವುದರೊಂದಿಗೆ ಪ್ರವಾಸಿ ತಂಡ ಬೃಹತ್ ಮೊತ್ತ ಪೇರಿಸಿ ತನ್ನ ಮೊದಲ ಸರದಿಯನ್ನು ಡಿಕ್ಲೇರ್ ಮಾಡಿಕೊಂಡಿತು.

ಇಲ್ಲಿಯ ಲಿಂಕನ್ ವಿಶ್ವವಿದ್ಯಾಲಯದ ಆವರಣದಲ್ಲಿರುವ ಬರ್ಟ್ ಸಟ್‌ಕ್ಲಿಫ್ ಓವಲ್‌ನಲ್ಲಿ ಭಾನುವಾರ ಪ್ರವಾಸಿ ತಂಡ ತನ್ನ ಮೊದಲ ಸರದಿಯನ್ನು ೫ ವಿಕೆಟ್‌ಗಳಿಗೆ ೪೬೪ರ ಮೊತ್ತದಲ್ಲಿ ಡಿಕ್ಲೇರ್ ಮಾಡಿಕೊಂಡ ನಂತರ ಎರಡನೇ ದಿನದಾಟದ ಮುಕ್ತಾಯದ ಹೊತ್ತಿಗೆ ನ್ಯೂಜಿಲೆಂಡ್(ಎ) ತಂಡ ತನ್ನ ಮೊದಲ ಸರದಿಯಲ್ಲಿ ಪ್ರಾರಂಭಿಕ ಬ್ಯಾಟರ್‌ಗಳಿಬ್ಬರನ್ನೂ ಕಳೆದುಕೊಂಡು ೩೬ ರನ್ ಗಳಿಸಿತ್ತು.

ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ `ಕಮ್ ಬ್ಯಾಕ್’ ಮಾಡಿರುವ ವೇಗಿ, ಕನ್ನಡಿಗ ಪ್ರಸಿದ್ಧ ಕೃಷ್ಣ(೨/೧೨) ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿ ನ್ಯೂಜಿಲೆಂಡ್(ಎ) ತಂಡದ ಇಬ್ಬರೂ ಪ್ರಾರಂಭಿಕ ಬ್ಯಾಟರ್‌ಗಳಾದ ರೈಸ್ ಮಾರಿಯು(೦) ಹಾಗೂ ಕರ್ಟಿಸ್ ಹೀಫಿ(೧೯) ಅವರುಗಳನ್ನು ಪೆವಿಲಿಯನ್ನಿಗೆ ಮರಳಿಸಿದ್ದು ಡೀನ್ ಫಾಕ್ಸ್ಕ್ರಾಫ್ಟ್(ಬ್ಯಾಟಿಂಗ್ ೧೦) ಹಾಗೂ ಜಾಕ್ ಗಿಬ್ಸನ್(ಬ್ಯಾಟಿಂಗ್ ೧) ಎರಡನೇ ದಿನದಾಟದ ಕೊನೆಯಲ್ಲಿ ಬ್ಯಾಟ್ ಮಾಡುತ್ತಿದ್ದಾರೆ.

ಇದಕ್ಕೂ ಮೊದಲು ೨ ವಿಕೆಟ್‌ಗಳಿಗೆ ೨೨೭ರ ಸ್ಕೋರಿನಿಂದ ಎರಡನೇ ದಿನದಾಟ ಮುಂದುವರಿಸಿದ ಪ್ರವಾಸಿಗರ ಪರ ಧ್ರುವ್ ಜುರೇಲ್(೭೧, ೯೫ ಎಸೆತ, ೯ ಬೌಂಡರಿ, ೨ ಸಿಕ್ಸರ್), ತಿಲಕ್ ವರ್ಮಾ(ಔಟಾಗದೇ ೮೧, ೧೬೪ ಎಸೆತ, ೫ ಬೌಂಡರಿ, ೨ ಸಿಕ್ಸರ್) ಹಾಗೂ ವಾಷಿಂಗ್ಟನ್ ಸುಂದರ್(ಔಟಾಗದೇ ೫೦, ೧೦೭ ಎಸೆತ, ೨ ಬೌಂಡರಿ) ಅವರುಗಳು ಉಪಯುಕ್ತ ಅರ್ಧ ಶತಕಗಳೊಂದಿಗೆ ಮಿಂಚುವುದರೊಂದಿಗೆ ಅದು ೫ ವಿಕೆಟ್‌ಗಳಿಗೆ ೪೬೪ ರನ್ ಗಳಿಸಿ ತನ್ನ ಪ್ರಥಮ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

ಸಂಕ್ಷಿಪ್ತ ಸ್ಕೋರುಗಳು: ಭಾರತ(ಎ): ೧೪೬ ಓವರ್‌ಗಳಲ್ಲಿ ೫ ವಿಕೆಟ್‌ಗಳಿಗೆ ೪೬೪ ಡಿಕ್ಲೇರ್ಡ್, ನ್ಯೂಜಿಲೆಂಡ್(ಎ): ೧೪ ಓವರ್‌ಗಳಲ್ಲಿ ೨ ವಿಕೆಟ್‌ಗಳಿಗೆ ೩೬.


ಹಂಚಿಕೊಳ್ಳಿ

Leave a Reply

Your email address will not be published. Required fields are marked *