ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲು ವ್ಹಿ.ಡಿ. ಕಾಮರೆಡ್ಡಿ ಆಗ್ರಹ
ಧಾರವಾಡ
ಗೌರಿಬಿದನೂರಿನ ಹಿರಿಯ ನ್ಯಾಯವಾದಿ ವೆಂಕಟರಮಣ ಸಣ್ಣಕ್ಕಿ ಅವರ ಮೇಲೆ ನಡೆದಿರುವ ಹಲ್ಲೆ ಘಟನೆಯನ್ನು ರಾಜ್ಯ ವಕೀಲರ ಪರಿಷತ್ತಿನ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ವ್ಹಿ.ಡಿ. ಕಾಮರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ.
ನ್ಯಾಯವಾದಿಗಳ ಮೇಲೆ ನಡೆಯುತ್ತಿರುವ ಇಂತಹ ಹಲ್ಲೆ ಪ್ರಕರಣಗಳು ಕಾನೂನು ವ್ಯವಸ್ಥೆಯ ಸುರಕ್ಷತೆ ಮತ್ತು ನ್ಯಾಯಾಂಗ ವೃತ್ತಿಯ ಗೌರವಕ್ಕೆ ಧಕ್ಕೆ ತರುವಂತಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಹಲ್ಲೆಗೆ ಕಾರಣರಾದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಅವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಕೀಲರ ಸುರಕ್ಷತೆಗಾಗಿ ಕಾನೂನು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ನ್ಯಾಯವಾದಿಗಳು ನಿರ್ಭೀತಿಯಿಂದ ತಮ್ಮ ವೃತ್ತಿ ನಿರ್ವಹಿಸಲು ಸೂಕ್ತ ರಕ್ಷಣೆ ಒದಗಿಸಬೇಕು ಎಂದು ವ್ಹಿ.ಡಿ. ಕಾಮರೆಡ್ಡಿ ಒತ್ತಾಯಿಸಿದ್ದಾರೆ.
