ರಾಜ್ಯಮಟ್ಟದ ಯುವ ಸಂಸತ್ತಿಗೆ ಧಾರವಾಡ ಜಿಲ್ಲೆಯ ಆರು ವಿದ್ಯಾರ್ಥಿನಿಯರ ಆಯ್ಕೆ

ಹಂಚಿಕೊಳ್ಳಿ

ಯುವ ಸಂಸತ್ ಸ್ಪರ್ಧೆ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯ, ನಾಯಕತ್ವದ ಗುಣ ಬೆಳೆಸಲು ಸಹಕಾರಿ

ಧಾರವಾಡ
ವಿದ್ಯಾರ್ಥಿಗಳಲ್ಲಿ ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವದ ಮೌಲ್ಯಗಳು, ಸಂಸದೀಯ ಕಾರ್ಯವಿಧಾನ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಿದ್ದ ಧಾರವಾಡ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ನಗರದ ಬಾಸೆಲ್ ಮಿಷನ್ ಬಾಲಕಿಯರ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಶಿಕ್ಷಣಾಧಿಕಾರಿ ಎಸ್. ಎಂ. ಹುಡೆದಮನಿ ಮಾತನಾಡಿ, ಯುವ ಸಂಸತ್ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಕೇವಲ ಸ್ಪರ್ಧೆಗಳಾಗಿರದೆ, ಭವಿಷ್ಯದ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವ ಪರಿಣಾಮಕಾರಿ ವೇದಿಕೆಗಳಾಗಿವೆ. ಸಂವಿಧಾನದ ಆಶಯಗಳನ್ನು ಅರಿತುಕೊಳ್ಳುವುದರ ಜೊತೆಗೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಾದ, ಚರ್ಚೆ, ಭಿನ್ನಾಭಿಪ್ರಾಯಗಳಿಗೆ ಗೌರವ ನೀಡುವ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರು ಹಾಗೂ ಸಾಹಿತಿ ನಾರಾಯಣ ಭಜಂತ್ರಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ನಾಳಿನ ದೇಶದ ಆಡಳಿತ ವ್ಯವಸ್ಥೆಯ ಭಾಗವಾಗುವವರು. ಯುವ ಸಂಸತ್ ಮೂಲಕ ಸಂಸತ್ತಿನ ಕಾರ್ಯವೈಖರಿ, ಜನಪ್ರತಿನಿಧಿಗಳ ಜವಾಬ್ದಾರಿ, ಜನಸಾಮಾನ್ಯರ ಸಮಸ್ಯೆಗಳ ಕುರಿತು ಚರ್ಚಿಸುವ ಕೌಶಲ್ಯ ಹಾಗೂ ಸಾಮಾಜಿಕ ಪ್ರಜ್ಞೆ ಬೆಳೆಯುತ್ತದೆ. ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ದೇಶದ ಆಗುಹೋಗುಗಳ ಬಗ್ಗೆ ಅರಿವು ಹೊಂದಿ ಪ್ರಶ್ನಿಸುವ ಮತ್ತು ವಿಚಾರವಂತಿಕೆಯಿಂದ ಅಭಿಪ್ರಾಯ ವ್ಯಕ್ತಪಡಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ರೇಖಾ ದೈವಜ್ಞ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣಾಧಿಕಾರಿ ನಫೀಜಾಬೇಗಂ ದಾವಲ್‌ಸಾಬನವರ, ವಿಷಯ ಪರಿವೀಕ್ಷಕರಾದ ಡಾ. ಗಿರಿಜಾ ಲಮಾನಿ, ಆರ್.ಎಂ. ಕಳಸಗೇರಿ, ವೀಣಾ ಮಳಲ್ಲಿ ಹಾಗೂ ಭೀಮರಾವ್ ಬಶೆಟ್ಟಿ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ಪ್ರಭಾಕರ ಲಗಮನ್ನವರ ಹಾಗೂ ಮಾರುತಿ ಕೊಳ್ಳನವರ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಅಧ್ಯಕ್ಷತೆಯನ್ನು ಇಸ್ತೇರಿಕಾ ತುಮಕೂರ ವಹಿಸಿದ್ದರು. ಸಂಜೀವ ಕುಂದಗೋಳ ನಿರೂಪಿಸಿದರು. ಪಿ.ಕೆ. ಪಟ್ಟಣಶೆಟ್ಟಿ ಸ್ವಾಗತಿಸಿದರು.

ಜಿಲ್ಲೆಯ ವಿವಿಧ ತಾಲೂಕುಗಳಿಂದ ತಲಾ ಹತ್ತು ವಿದ್ಯಾರ್ಥಿಗಳನ್ನು ಒಳಗೊಂಡ ತಂಡಗಳು ತಾಲೂಕು ನೋಡಲ್ ಅಧಿಕಾರಿಗಳ ಉಸ್ತುವಾರಿಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಸಂಸದೀಯ ಜ್ಞಾನ, ವಾಕ್ಚಾತುರ್ಯ, ವಿಷಯ ಮಂಡನೆ ಹಾಗೂ ಚರ್ಚಾ ಕೌಶಲ್ಯವನ್ನು ಪ್ರದರ್ಶಿಸಿದವು.

ರಾಜ್ಯಮಟ್ಟಕ್ಕೆ ಆರು ವಿದ್ಯಾರ್ಥಿನಿಯರ ಆಯ್ಕೆ;
ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ ಧಾರವಾಡ ಜಿಲ್ಲೆಯ ಅಕ್ಷತಾ ರಾಯ್ಕರ, ನಿವೇದಿತಾ ಗೋಡಿ, ಸಹನಾ ಬಟಕುರ್ಕಿ, ಸಾವಿತ್ರಿ ಸಾಮೊಳ್ಳಿ, ಪಾರು ದೇವಣ್ಣವರ ಹಾಗೂ ಗುರಸಿದ್ದಮ್ಮ ನಿಡವಣಿ ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸಂವಿಧಾನಿಕ ಅರಿವು, ಪ್ರಜಾಪ್ರಭುತ್ವದ ಬದ್ಧತೆ ಮತ್ತು ನಾಯಕತ್ವದ ಸಾಮರ್ಥ್ಯವನ್ನು ಬೆಳೆಸುವ ಇಂತಹ ಶೈಕ್ಷಣಿಕ ಚಟುವಟಿಕೆಗಳು ಭವಿಷ್ಯದ ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿಯಾಗಲಿವೆ. ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರ ಸಾಧನೆ ಜಿಲ್ಲೆಯ ಶೈಕ್ಷಣಿಕ ವಲಯಕ್ಕೆ ಹೆಮ್ಮೆಯ ಸಂಗತಿಯಾಗಿದ್ದು, ಅವರ ಮುಂದಿನ ಸಾಧನೆಗೆ ಎಲ್ಲರೂ ಶುಭ ಹಾರೈಸಿದ್ದಾರೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *