ಮ್ಯಾನೇಜ್‌ಮೆಂಟ್ ಶಿಕ್ಷಣದಿಂದ ಉದ್ಯೋಗದಲ್ಲಿ ವಿಫುಲ ಅವಕಾಶ; ಡಾ. ಅಜಿತ ಪ್ರಸಾದ

ಹಂಚಿಕೊಳ್ಳಿ

ಧಾರವಾಡ
ನಿರ್ವಹಣಾ ಶಿಕ್ಷಣದ ಪಠ್ಯಕ್ರಮಗಳ ಜೊತೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳಿಂದ ಕೊಡಮಾಡುವ ಮೌಲ್ಯವರ್ಧಿತ ಸರ್ಟಿಫಿಕೇಶನ್‌ಗಳು ವೃತ್ತಿಯಲ್ಲಿ ಮುಂದುವರಿಯಲು ಹಾಗೂ ಸ್ವಂತ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್‌ನ ಡಾ. ಡಿ. ವೀರೇಂದ್ರ ಹೆಗ್ಗಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ಸ್ಟಡೀಸ್ ಆ್ಯಂಡ್ ರಿಸರ್ಚ್‌ನಲ್ಲಿ ಬುಧವಾರ ಎಂಬಿಎ ೨೦೨೬-೨೮ನೇ ಸಾಲಿನ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಿಕೆಯ ವಾಸ್ತವಿಕ ವಸ್ತುಸ್ಥಿತಿಯ ಅಧ್ಯಯನದಿಂದ ತಾನು ಮುಂದೆ ನಿರ್ವಹಿಸಲಿರುವ ಕಾರ್ಯಕ್ಷೇತ್ರದಲ್ಲಿ ಕೌಶಲ್ಯಪೂರಿತ ಜಾಣ್ಮೆಯನ್ನು ತೋರಬಹುದಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜನತಾ ಶಿಕ್ಷಣ ಸಮಿತಿ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಪ್ರಸ್ತುತ ಕೃತಕಬುದ್ಧಿಮತ್ತೆಯನ್ನು ಅಳವಡಿಸಿಕೊಂಡು, ಸಕಾರಾತ್ಮಕ ನಡವಳಿಕೆ, ಸಹನೆ, ಮನೋಸಾಮರ್ಥ್ಯ, ಸಾಮಾಜಿಕ ಜವಾಬ್ದಾರಿ, ಕ್ರಿಯಾಶೀಲತೆ ಮುಂತಾದ ಸಾಮಾಜಿಕ ಮೌಲ್ಯಗಳನ್ನು ರೂಢಿಸಿಕೊಂಡು ಪ್ರಬುದ್ಧ ವ್ಯಕ್ತಿತ್ವವನ್ನು ರೂಪಿಸಿ ಜೀವನದ ಗುರುತರ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಬಹುದಾಗಿದೆ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕ ಡಾ. ಸುನೀಲ್‌ಕುಮಾರ್ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಕೀರ್ತಿ ಕುಲಕರ್ಣಿ ಪರಿಚಯಿಸಿದರು. ಪ್ರೊ. ಚೇತನಾ ದೊಡವಾಡ ನಿರೂಪಿಸಿದರು. ಡಾ. ಪೂಜಾ ಐನಾಪೂರ ವಂದಿಸಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *