35 ವರ್ಷಗಳ ಬಳಿಕ ಒಂದಾದ ಕೆ.ಇ. ಬೋರ್ಡ್ ಶಾಲೆಯ 1990ನೇ ಬ್ಯಾಚ್ ವಿದ್ಯಾರ್ಥಿಗಳು

ಹಂಚಿಕೊಳ್ಳಿ

ದಾಂಡೇಲಿಯಲ್ಲಿ ಸ್ನೇಹ ಸಮ್ಮಿಲನ; ಬಾಲ್ಯದ ನೆನಪುಗಳಿಗೆ ಮತ್ತೆ ಜೀವ ತುಂಬಿದ ಹಳೆಯ ಗೆಳೆಯರು

ಧಾರವಾಡ
ಕೆ.ಇ. ಬೋರ್ಡ್ ಶಾಲೆಯ 1990ನೇ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು ಬರೋಬ್ಬರಿ 35 ವರ್ಷಗಳ ಬಳಿಕ ಒಂದೆಡೆ ಸೇರಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದರು.

ದಾಂಡೇಲಿಯ ವಿಜಿಲಿಂಗ್ ವುಡ್ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಈ ಸಮ್ಮಿಲನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಖ್ಯಾತ ವೈದ್ಯರಾದ ಡಾ. ರಾಜೀವ್ ಜೋಶಿ, ಡಾ. ದಿನೇಶ್ ದೇಸಾಯಿ, ಪವಿತ್ರಾ ಹಿರೇಮಠ, ಲೀಲಾ ಪಟೇಲ್, ಪ್ರಸಿದ್ಧ ಸಿತಾರ್ ವಾದಕ ಉಸ್ತಾದ್ ರೈಸ್ ಖಾನ್, ಭಾರತೀಯ ಸೇನೆಯಲ್ಲಿ ದೇಶಸೇವೆ ಸಲ್ಲಿಸುತ್ತಿರುವ ರಾಮಚಂದ್ರ ತಿಬೇಲಿ, ಡಿಆರ್‌ಡಿಒ ವಿಜ್ಞಾನಿ ಅಶ್ವಿನ್ ಕುಮಾರ್ ಸೇರಿದಂತೆ ಸಾಫ್ಟ್‌ವೇರ್ ಉದ್ಯಮಿಗಳು ಹಾಗೂ ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಸ್ನೇಹಿತರು ಪಾಲ್ಗೊಂಡಿದ್ದರು.

ದಶಕಗಳ ಬಳಿಕ ಭೇಟಿಯಾದ ಗೆಳೆಯರು ಶಾಲಾ ದಿನಗಳ ಸವಿ ನೆನಪುಗಳನ್ನು ಮೆಲುಕು ಹಾಕಿ, ಹಳೆಯ ಅನುಭವಗಳನ್ನು ಹಂಚಿಕೊಂಡರು. ಪರಸ್ಪರ ಕುಶಲೋಪರಿ ವಿಚಾರಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. 35 ವರ್ಷಗಳ ಅಂತರವನ್ನೂ ಮರೆಸಿದ ಈ ಸ್ನೇಹ ಸಮ್ಮಿಲನ ಎಲ್ಲರಲ್ಲೂ ಹೊಸ ಉತ್ಸಾಹ ಮೂಡಿಸಿತು.

ಮರುದಿನ ಎಲ್ಲರೂ ತಾವು ವಿದ್ಯಾಭ್ಯಾಸ ಮಾಡಿದ ಕೆ.ಇ. ಬೋರ್ಡ್ ಶಾಲೆಗೆ ಭೇಟಿ ನೀಡಿ, ಶಾಲೆಯ ಆವರಣವನ್ನು ಸುತ್ತಾಡಿದರು. ತಾವು ಪಾಠ ಕಲಿತ ಹಳೆಯ ತರಗತಿ ಕೊಠಡಿಗಳಿಗೆ ತೆರಳಿ, ಹಿಂದೆ ಕುಳಿತುಕೊಳ್ಳುತ್ತಿದ್ದ ಬೆಂಚುಗಳ ಮೇಲೆ ಕುಳಿತುಕೊಂಡು ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. ಬಾಲ್ಯದ ಒಡನಾಟ, ಶಿಕ್ಷಕರ ಮಾರ್ಗದರ್ಶನ ಹಾಗೂ ಶಾಲೆಯಲ್ಲಿ ಕಳೆದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಂಡು ಭಾವುಕರಾದರು.

35 ವರ್ಷಗಳ ಬಳಿಕ ಮತ್ತೆ ಒಂದಾದ ಸ್ನೇಹಿತರ ಈ ಸಮ್ಮಿಲನ, ಸ್ನೇಹಕ್ಕೆ ಕಾಲದ ಅಂತರವಿಲ್ಲ ಎಂಬುದನ್ನು ಸಾರಿತು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *