ವೀರಶೈವ ಧರ್ಮದ ಕಾಶಿ ಜ್ಞಾನ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ನುಡಿ
ವಾರಾಣಸಿ(ಉ.ಪ್ರ)
ವಿಶ್ವ ಪ್ರಸಿದ್ಧ ಕಾಶಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪನೆಗೆ ಅಂದಿನ ಕಾಶಿ ಪೀಠದ ಜಗದ್ಗುರು ಶಿವಲಿಂಗ ಶಿವಾಚಾರ್ಯ ಭಗವತ್ಪಾದರು ಜಂಗಮಪುರದ 75 ಎಕರೆ ಭೂಮಿಯನ್ನು ದಾನ ಮಾಡಿ ವಿದ್ಯಾವಿಕಾಸಕ್ಕೆ ಶ್ರಮಿಸಿದ್ದಾರೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾಶಿ ಮಹಾರಾಜ ದಿ. ನರೇಶ ಡಾ. ವಿಭೂತಿನಾರಾಯಣ ಸಿಂಹ ಅವರ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿಕ್ರಮ ಸಂವತ್ಸರ 631 ಅಂದರೆ ಕ್ರಿ.ಶ. 574 ರಲ್ಲಿ ತಮ್ಮ ಪೂರ್ವಜರ ಸದ್ಗತಿಗಾಗಿ ವಾರಾಣಸಿ ನಗರದ ಕರ್ದಮೇಶ್ವರ ಮಹದೇವ ಮಂದಿರದಿಂದ ಗಂಗಾ ನದಿಯ ದಂಡೆಯವರೆಗಿನ ವಿಶಾಲವಾದ 300 ಎಕರೆ ಭೂಮಿಯನ್ನು ಕಾಶಿ ಜ್ಞಾನಪೀಠದ 51ನೆಯ ಪೀಠಾಚಾರ್ಯರಾಗಿದ್ದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ವಿಶ್ವರಾಧ್ಯ ಭಗವತ್ಪಾದರಿಗೆ ದಾನಮಾಡಿದ್ದರು ಎಂದರು.
1916 ರಲ್ಲಿ ಮದನ ಮೋಹನ ಮಾಲವೀಯ ಅವರು ಕಾಶಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪನೆಗೆ ನೆರವು ನೀಡುವಂತೆ ಕಾಶಿ ಪೀಠಕ್ಕೆ ಮನವಿ ಮಾಡಿದಾಗ ಆಗಿನ ಪೀಠಾಚಾರ್ಯರಾಗಿದ್ದ ಶ್ರೀ ಜಗದ್ಗುರು ಶಿವಲಿಂಗ ಶಿವಾಚಾರ್ಯ ಭಗವತ್ಪಾದರು ಶ್ರೀಪೀಠದಿಂದ 75 ಎಕರೆ ಭೂಮಿಯನ್ನು ದಾನ ಮಾಡಿದ್ದು, ಈ ವಿಚಾರ ಕಾಶಿ ಹಿಂದೂ ವಿಶ್ವದ್ಯಾಲಯದ ಇತಿಹಾಸ ಪುಸ್ತಕದಲ್ಲಿ ಉಲ್ಲೇಖಿತಗೊಂಡಿದೆ ಎಂದರು.
ಕಾಶಿಯ ಮಹಾರಾಜ ಡಾ. ವಿಭೂತಿನಾರಾಯಣಸಿಂಹ ಅವರನ್ನು ಕಾಶಿಯ ಜನತೆ ‘ನಡೆದಾಡುವ ವಿಶ್ವನಾಥ’ನೆಂದೇ ಭಾವಿಸುತ್ತಿದ್ದರು. ರಾಜರು ರಸ್ತೆಯಲ್ಲಿ ಹೋಗುವಾಗ ಇಕ್ಕೆಲಗಳಲ್ಲಿ ನಿಂತ ಕಾಶಿವಾಸಿಗಳು ‘ಹರಹರ ಮಹಾದೇವ’ ಎಂಬ ಜಯಘೋಷವನ್ನು ಮಾಡುತ್ತಾ ಅವರನ್ನು ಸ್ವಾಗತಿಸುತ್ತಿದ್ದರು. ಅಂತೆ ರಾಜ ಪ್ರತ್ಯಕ್ಷ ದೇವತಾ ಎಂಬ ನಾಡ ನುಡಿಯು ಅವರಿಗೆ ಅನ್ವರ್ಥವಕವಾಗಿತ್ತು. ಪ್ರಸ್ತುತ ಅವರ ಜನ್ಮ ಶತಮಾನೋತ್ಸವವನ್ನು ವರ್ಷವಿಡೀ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದೂ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಕಾಶಿ ಹಿಂದೂ ವಿಶ್ವವಿದ್ಯಾಲಯದ ಕುಲಪತಿ ಡಾ. ಅಜಿತ್ಕುಮಾರ್ ಚತುರ್ವೇದಿ ಅಧ್ಯಕ್ಷತೆ ವಹಿಸಿದ್ದರು. ಮಹಾರಾಣಿಯರಾದ ಹರಪ್ರಿಯಾ, ವಿಷ್ಣುಪ್ರಿಯಾ ಮತ್ತು ಕೃಷ್ಣಪ್ರಿಯಾ ಇವರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ‘ಸಚಲ ವಿಶ್ವನಾಥ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಮನೋಜ್ಕುಮಾರ್ ಗುಪ್ತ ಸ್ವಾಗತಿಸಿದರು. 108 ಜನರಿಗೆ ವಿಭೂತಿನಾರಾಯಣರ ಭಾವಚಿತ್ರಗಳನ್ನು ನೀಡಿ ಗೌರವಿಸಲಾಯಿತು. ಶ್ರೀ ಕಾಶಿ ಪೀಠದ ವ್ಯವಸ್ಥಾಪಕ ಆರ್.ಕೆ. ಸ್ವಾಮಿ, ಶಿವಾನಂದ ಹಿರೇಮಠ ಶಿವಮೂರ್ತಿ ಹಿರೇಮಠ, ಹಿರಿಯ ವಿದ್ಯಾರ್ಥಿ ಅಖಿಲೇಶ್ ದೇವ್ ಇದ್ದರು.

