ಸದೃಢ ಮನಸ್ಸೇ ಸಾಧನೆಗೆ ಮೆಟ್ಟಿಲು; ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ

ಹಂಚಿಕೊಳ್ಳಿ

ಧಾರವಾಡ ತಾಲೂಕಾ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರಿಗೆ ಗೌರವ ಸನ್ಮಾನ ಕಾರ್ಯಕ್ರಮ

ಧಾರವಾಡ
ವಿದ್ಯಾರ್ಥಿಗಳು ಭವಿಷ್ಯ ಸುಭದ್ರವಾಗಬೇಕಾದರೆ, ಉತ್ತಮ ಸಾಧನೆ ಮಾಡಬೇಕಾದರೆ, ಸಮಯ ಪಾಲನೆ ಮಾಡುತ್ತಾ ಉತ್ತಮ ಆದರ್ಶಗಳನ್ನು ರೂಢಿಸಿಕೊಂಡು ಸಜ್ಜನರ ಸಂಘ ಮಾಡಿ, ಸದೃಢ ಮನಸ್ಸು ಹೊಂದಿದರೆ ಸಾಧನೆ ಮಾಡಲು ಸಾಧ್ಯ ಎಂದು ಧಾರವಾಡ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದರು.

ನಗರದ ಧಾರವಾಡ ಗ್ರಾಮೀಣ ವಲಯದ ಗುರುಭವನದಲ್ಲಿ ನಡೆದ ತಾಲೂಕಾ ಪ್ರೌಢ ಶಾಲಾ ಶಿಕ್ಷಕರ ಪ್ರತಿಭಾ ಪುರಸ್ಕಾರ ಗುರು ಬಳಗ ಸಮಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಧಾರವಾಡ ಗ್ರಾಮೀಣ ವಲಯ ಸಹಯೋಗದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರಿಗೆ ಗೌರವ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಾ ಪ್ರತಿಭಾ ಪುರಸ್ಕಾರ ಗುರು ಬಳಗ ಸಮಿತಿ ಹಲವು ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಶಿಕ್ಷಕರಿಗೆ ಗೌರವಿಸುತ್ತಾ ಬರುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಇದಕ್ಕೆ ಅನೇಕರು ಕೈಜೋಡಿಸಿದ್ದು ಉತ್ತಮ ಬೆಳವಣಿಗೆ. ತಾಲೂಕಲ್ಲಿ ಉತ್ತಮ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾಲಕ ಪಾತ್ರ ಬಹುಮುಖ್ಯವಾಗಿದ್ದು. ನಮ್ಮ ತಾಲೂಕಲ್ಲಿ ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸೇವೆ ಸದಾ ಸ್ಮರಣೀಯ. ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆ ಸ್ಮರಣೀಯ. ಭವಿಷ್ಯದಲ್ಲಿಯೂ ಇದೇ ಸಾಧನೆ ಮುಂದುವರೆಸಿ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರೀಯ ಪ್ರಾಥಮಿಕ ಶಿಕ್ಷಕರ ಪಡೆರೇಶನ್‌ ಸಂಘ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡುತ್ತಾ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಸಮುದಾಯದ ಸಹಭಾಗಿತ್ವ ಅತಿ ಅಗತ್ಯ. ಶಿಕ್ಷಕರು ನಿಷ್ಟೆಯಿಂದ ಕಾರ್ಯನಿರ್ವಹಣೆ ಮಾಡುತ್ತಿದು ಇದರ ಪರಿಣಾಮ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಹಕಾರಿಯಾಗಿದೆ. ಶಿಕ್ಷಕರು ಹಲವಾರು ವೃತ್ತಿಪರ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವು ಹಂತ ಹಂತವಾಗಿ ಪರಿಹಾರ ಮಾಡಲು ಇಲಾಖೆ ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದರು.

ಧಾರವಾಡ ಪ್ರೌಢ ಶಾಲಾ ಶಿಕ್ಷರರ ಪ್ರತಿಭಾ ಪುರಸ್ಕಾರ ಸಮಿತಿ ಹಲವು ವರ್ಷಗಳಿಂದ ಈ ಕಾರ್ಯವನ್ನು ಮಾಡುತ್ತಾ ಬಂದಿರುವುದು ಸಂತೋಷದ ವಿಚಾರ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಶಿಕ್ಷಕರಿಗೆ ಪ್ರೋತ್ಸಾಹ ನೀಡುತ್ತಿರುವುದು ಅವರು ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಪ್ರೇರಣೆ ನೀಡಿದಂತೆ ಎಂದು ಹೇಳಿದರು.

ಇದೇ ವೇಳೆ ತಾಲೂಕಾ ಪ್ರೌಢಶಾಲಾ ಶಿಕ್ಷರರ ಪ್ರತಿಭಾ ಪುರಸ್ಕಾರ ಸಮಿತಿ ಕಾರ್ಯದರ್ಶಿ ರೇವಣಸಿದ್ದಪ್ಪ ಎಸ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಿತಿ ಹುಟ್ಟು ಬೆಳವಣಿಗೆ ಯಶಸ್ವಿಯಾಗಿ ನಡೆಸಿಕೊಂಡು ಬರಲು ಕಾರಣೀಕರ್ತರಾದವನ್ನು ದಾನಿಗಳನ್ನು ಸ್ಮರಿಸಿದರು. ನಿವೃತ್ತ ಪ್ರಾಚಾರ್ಯರು ಡಯಟ್‌ ಬೆಳಗಾವಿ ಅಶೋಕಕುಮಾರ ಸಿಂದಗಿ, ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಭಜಂತ್ರಿ , ಡಿ,ವಾಯ್‌.ಪಿ.ಸಿ ಬಾಗಲಕೋಟೆಯ ವಿಜಯಲಕ್ಷ್ಮೀ ಪಾಟೀಲ ಮಾತನಾಡಿದರು.

ಧಾರವಾಡ ಗ್ರಾಮೀಣ ವಲಯದ ಪ್ರೌಢ ಶಾಲಾ ಶಿಕ್ಷಕರ ಗುರುಬಳಗದ ವತಿಯಿಂದ 2025-2026 ನೇ ಎಸ್‌ ಎಸ್‌ ಎಲ್‌ ಸಿ ವಾರ್ಷೀಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೆ, ಎಂಟು, ಹತ್ತನೆಯ RANK ಪಡೆದ ಹಾಗೂ ಧಾರವಾಡ ಗ್ರಾಮೀಣ ವಲಯಕ್ಕೆ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೂ, ಧಾರವಾಡ ವಲಯದ ಎಲ್ಲಾ ಪ್ರೌಢ ಶಾಲೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೂ, ಚಿತ್ರಕಲೆ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ, ಶೇ 100 ಫಲಿತಾಂಶ ಸಾಧನೆ ಮಾಡಿದ ಶಾಲೆಗಳ ಮುಖ್ಯೋಪಾಧ್ಯಾಯರಿಗೂ ಸರ್ವ ಸಿಬ್ಬಂದಿ ವರ್ಗದವರಿಗೆ, ಶೇ 100 ರಷ್ಟು ಫಲಿತಾಂಶ ಸಾಧನೆ ಮಾಡಿದ ವಿಷಯ ಶಿಕ್ಷಕರಿಗೆ, ಉತ್ತಮ ದೈಹಿಕ ಶಿಕ್ಷಣ, ಚಿತ್ರಕಲಾ ಶಿಕ್ಷಕರಿಗೂ, ದಾನಿಗಳಿಗೂ, ಗಣ್ಯರಿಗೂ ಇದೇ ವೇಳೆ ಸನ್ಮಾನಿಸಲಾಯಿತು.

ವೇದಿಕೆ ಮೇಲೆ ಕುಮಾರ ಕೆ.ಎಫ್‌, ಈಶ್ವರ ಆಯಟ್ಟಿ, ಎಂ.ಎನ್‌. ಸವಣೂರ, ರಾಜಶೇಖರ ಹೊನ್ನಪ್ಪನವರ, ಅಜಿತ ದೇಸಾಯಿ, ರಾಜಶೇಖರ ಹೊನ್ನಪ್ಪನವರ, ಶ್ರೀಕಾಂತ ಗೌಡರ, ಸಿ.ಎಂ. ಲಾಳನವರ, ವೆಂಕಟೇಶ ಲಕ್ಷಾಣಿ ಹಾಗೂ ಧಾರವಾಡ ಗ್ರಾಮೀಣ ವಲಯದ ಪ್ರೌಢ ಶಾಲಾ ಶಿಕ್ಷಕರ ಪ್ರತಿಭಾ ಪುರಸ್ಕಾರ ಗುರು ಬಳಗದ ಸರ್ವ ಸದಸ್ಯರು ಇತರರೂ ಉಪಸ್ಥಿತರಿದ್ದರು. ಧಾರವಾಡ ಗಾಮೀಣ ವಲಯದ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ. ಕುರಕುರಿ ಸ್ವಾಗತಿಸಿದರು. ಶಿಕ್ಷಕ ಲೇಖಕ ರಂಗನಾಥ ವಾಲ್ಮೀಕಿ ನಿರೂಪಿಸಿದರು. ಎಚ್‌.ಎಸ್‌. ಬಡಿಗೇರ ವಂದಿಸಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *