ಬದುಕಿನ ಮೌಲ್ಯಗಳನ್ನು ಅರಿತು ಬಾಳುವುದೇ ನಿಜವಾದ ಪಾದಯಾತ್ರೆ: ಶ್ರೀ ರಂಭಾಪುರಿ ಜಗದ್ಗುರುಗಳು

ಹಂಚಿಕೊಳ್ಳಿ

ಅಜ್ಜಂಪುರ
ಪಾದಯಾತ್ರೆ ಕೇವಲ ಯಾತ್ರೆಯಲ್ಲ. ಅದು ಬದುಕಿನ ಮೌಲ್ಯಗಳನ್ನು ಅರಿಯುವ ಆತ್ಮಯಾತ್ರೆ. ಆತ್ಮ ಶುದ್ಧಿಯ ಸಾಧನೆ ಹಾಗೂ ಮನುಷ್ಯನೊಳಗಿನ ಮಾನವೀಯತೆಯನ್ನು ಜಾಗೃತಗೊಳಿಸುವುದೇ ನಿಜವಾದ ಪಾದಯಾತ್ರೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಸೋಮವಾರ ತಾಲೂಕಿನ ಬುಕ್ಕಾಂಬುಧಿ ಬೆಟ್ಟದ ಪವಿತ್ರ ತಪೋತಾಣದಲ್ಲಿ ಪಾದಯಾತ್ರೆ ಮಂಗಲ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು, ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಪಾದಯಾತ್ರೆಗೆ ವಿಶೇಷವಾದ ಸ್ಥಾನವಿದೆ. ಪಾದಯಾತ್ರೆ ಎನ್ನುವುದು ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುವ ದೈಹಿಕ ಪ್ರಯಾಣವಲ್ಲ. ಅದು ಭಕ್ತಿಯ ಅಭಿವ್ಯಕ್ತಿ ಶ್ರದ್ಧೆಯ ಸಂಕೇತ ಎಂದರು.

ಶ್ರೀ ಜಗದ್ಗುರು ರೇಣುಕಾಚಾರ್ಯರು ಯಾವುದೇ ಒಂದು ವರ್ಗಕ್ಕೆ ಸೀಮಿತರಾದವರಲ್ಲ. ಅವರು ಸಮಸ್ತ ಮನುಕುಲದ ಕಲ್ಯಾಣವನ್ನು ಬಯಸುವ ವಿಶ್ವ ಮಾನವ ಸಂದೇಶವನ್ನು ಸಾರಿದ್ದಾರೆ. ಗುರು ಪರಂಪರೆ ಉಳಿದರೆ ಧರ್ಮದ ಜ್ಞಾನ ಪರಂಪರೆ ಮುಂದಿನ ಪೀಳಿಗೆಗೆ ಹರಿದು ಹೋಗುತ್ತದೆ. ಪಂಚ ಪೀಠದ ಗುರು ಪರಂಪರೆ ನಮ್ಮ ಧರ್ಮದ ಶಕ್ತಿಯಾಗಿದೆ‌ ಎಂದರು.

ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಹಾಸನ ಜಿಲ್ಲೆ ಅಲೂರು ತಾಲೂಕಿನ ಕಾರ್ಜುವಳ್ಳಿ ಹಿರೇಮಠದಿಂದ ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿ ಕ್ಷೇತ್ರಕ್ಕೆ ಭಕ್ತರೊಡಗೂಡಿ 136 ಕಿ.ಮೀ. ಪಾದಯಾತ್ರೆ ಕೈಗೊಂಡು ಇಂದು ಮಂಗಲಗೊಳಿಸಿರುವುದು ಅವರಲ್ಲಿರುವ ಧರ್ಮ ಶ್ರದ್ಧೆಗೆ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿ ರೇಶ್ಮೆ ಮಡಿ ಹೊದಿಸಿ ಸ್ಮರಣಿಕೆ ಫಲ ತಾಂಬೂಲವಿತ್ತು ಶುಭ ಹಾರೈಸಿದರು.

ಸಮಾರಂಭ ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವ ಧರ್ಮ ಮಾನವೀಯ ಮೌಲ್ಯಗಳನ್ನು ಬಿತ್ತುವ ಜೀವಂತ ಪರಂಪರೆಯ ಪ್ರತೀಕವಾಗಿದೆ. ಜ್ಞಾನ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಜನಮನಕ್ಕೆ ಮನವರಿಕೆ ಮಾಡಿಕೊಡುವುದೇ ಗುರುವಿನ ಧ್ಯೇಯವಾಗಿದೆ. ಕಾರ್ಜುವಳ್ಳಿ ಶ್ರೀಗಳವರು ಪಾದಯಾತ್ರೆ ಮೂಲಕ ಜನರಲ್ಲಿ ಧರ್ಮಾಸಕ್ತಿ ಮತ್ತು ಕ್ರಿಯಾಶೀಲ ಬದುಕಿಗೆ ಪ್ರೇರಣೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಕಡೇನಂದಿಹಳ್ಳಿ-ದುಗ್ಲಿ ಕ್ಷೇತ್ರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರೂ ತಮ್ಮ ಊರಿಗೆ ಮರಳುವಾಗ ಕೇವಲ ಪ್ರಸಾದವನ್ನು ಕೊಂಡೊಯ್ಯದೇ ಒಂದು ಒಳ್ಳೆಯ ವಿಚಾರವನ್ನು ಒಂದು ಮಾನವೀಯ ಸಂಕಲ್ಪವನ್ನು ಮತ್ತು ಸಮಾಜಕ್ಕೆ ಒಳಿತು ಮಾಡುವ ಚಿಂತನದ ಜವಾಬ್ದಾರಿಯನ್ನು ಹೊತ್ತುಕೊಂಡು ಹೋದರೆ ಶ್ರೀಗಳ ಪಾದಯಾತ್ರೆ ನಿಜವಾಗಲೂ ಸಾರ್ಥಕಗೊಳ್ಳುತ್ತದೆ ಎಂದರು.

ಪಾದಯಾತ್ರೆ ಕೈಗೊಂಡು ತಪೋತಾಣದಲ್ಲಿ ಮಂಗಲಗೊಳಿಸಿದ ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸನಾತನ ಧಾರ್ಮಿಕ ಪರಂಪರೆಯ ಮಹೋನ್ನತ ಆಚಾರ್ಯರಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಅಗ್ರಗಣ್ಯರು. ಮಹರ್ಷಿ ಅಗಸ್ತ್ಯರಿಗೆ ಬೋಧಿಸಿದ ಶಿವಜ್ಞಾನ, ಧರ್ಮತತ್ವ ಮತ್ತು ಆಧ್ಯಾತ್ಮದ ವಿಚಾರ ಧಾರೆಗಳು ಮನುಷ್ಯನ ಬದುಕನ್ನು ಪವಿತ್ರಗೊಳಿಸುವ ಸಾಧನಗಳಾಗಿವೆ. ಅವರ ಸಂದೇಶವನ್ನು ಪಾದಯಾತ್ರೆ ಮೂಲಕ ಎಲ್ಲರಿಗೂ ತಲುಪಿಸುವ ಉದ್ದೇಶ ನಮ್ಮದಾಗಿದೆ. 136 ಕಿ.ಮೀಟರ್ ಪಾದಯಾತ್ರೆಯಲ್ಲಿ ಅನೇಕ ಶ್ರೀಗಳು ಭಕ್ತರು ಪಾಲ್ಗೊಂಡು ಸಹಕರಿಸಿದ್ದನ್ನು ಮರೆಯಲಾಗದೆಂದರು.

ಅಷ್ಟಾವರಣ ಅರಿವು ಸಮಾರಂಭದಲ್ಲಿ ಬೀರೂರು ರುದ್ರಮುನಿ ಶಿವಾಚಾರ್ಯರು ನುಡಿ ನಮನ ಸಲ್ಲಿಸಿದರು. ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು, ಚನ್ನಗಿರಿಯ ಶಿವಶಾಂತವೀರ ಶಿವಾಚಾರ್ಯರು, ನುಗ್ಗೇಹಳ್ಳಿ ಮಹೇಶ್ವರ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಯಸಳೂರು ಚನ್ನಸಿದ್ಧೇಶ್ವರ ಶಿವಾಚಾರ್ಯರು, ಗೋವಿನಕೋವಿ ವಿಶ್ವಾರಾಧ್ಯ ಹಾಲಸ್ವಾಮಿಗಳು ಮತ್ತು ಅರಕೆರೆ ಚನ್ನವೀರ ಸ್ವಾಮಿಗಳು ಪಾಲ್ಗೊಂಡಿದ್ದರು. ಹಾಸನದ ದೇವರಾಜ ಶಾಸ್ತ್ರಿಗಳು ಪ್ರಾಸ್ತಾವಿಕ ಮಾತನಾಡಿದರು.

ಶ್ರೀ ದುರ್ಗಾ ಪರಮೇಶ್ವರಿ ಮಹಿಳಾ ಮಂಡಳ ಸದಸ್ಯರಿಂದ ಪ್ರಾರ್ಥನೆ, ವೈ.ಬಿ. ಟೀಕರಾಜು ಸ್ವಾಗತಿಸಿದರು. ಪ್ರಾತ:ಕಾಲ ಲಿಂ. ಶ್ರೀಮದ್ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳವರ ಮಂಗಲ ಮೂರ್ತಿಗೆ ರುದ್ರಾಭಿಷೇಕ ಮತ್ತು ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಶ್ರೀಮದುಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟಿನ ಕಾರ್ಯದರ್ಶಿ ಹೆಚ್.ಪಿ. ಸುರೇಶ ಮತ್ತು ಇನ್ನಿತರ ಎಲ್ಲಾ ಸದಸ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ ಪಡೆದರು. ಪ್ರತಿ ವರ್ಷದಂತೆ ಶ್ರೀ ಕ್ಷೇತ್ರದಲ್ಲಿ ಬಂದ ಜಂಗಮ ಮೂರ್ತಿಗಳಿಗೆ ಜಂಗಮಾರಾಧನೆ ಜರುಗಿ ಆಗಮಿಸಿದ ಎಲ್ಲ ಭಕ್ತರಿಗೂ ಪ್ರಸಾದ ವಿನಿಯೋಗ ಜರುಗಿತು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *