ಜಲಂಧರ್
ಆಡಿದ ಮೂರೂ ಪಂದ್ಯಗಳನ್ನು ಜಯಿಸಿ ಗೆಲುವಿನ ಹ್ಯಾಟ್ರಿಕ್ ದಾಖಲಿಸಿದ ಹಾಲಿ ಚಾಂಪಿಯನ್ ಭಾರತ ಇಲ್ಲಿ ನಡೆದಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ.
ಒಲಿಂಪಿಯನ್ ಸುರ್ಜೀತ್ ಸಿಂಗ್ ಹಾಕಿ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ಹರ್ಮನ್ಪ್ರೀತ್ ಸಿಂಗ್ ಪಡೆ ಜಪಾನನ್ನು ೪-೧ ಗೋಲುಗಳಿಂದ ಪರಾಭವಗೊಳಿಸಿತು.
ಅಭಿಷೇಕ್ ಸಿಂಗ್ ೧೧ ಹಾಗೂ ೫೧ನೇ ನಿಮಿಷಗಳಲ್ಲಿ ಗೋಲು ಬಾರಿಸಿ ಭಾರತದ ಗೆಲುವಿನ ರೂವಾರಿಯೆನಿಸಿದರೆ, ಹರ್ಮನ್ಪ್ರೀತ್ ಸಿಂಗ್(೪೭ನೇ ನಿಮಿಷ) ಹಾಗೂ ವಿಷ್ಣುಕಾಂತ ಸಿಂಗ್(೫೬ನೇ ನಿಮಿಷ) ತಲಾ ಒಂದೊಂದು ಯಶ ಕಂಡರು.
ಜಪಾನಿನ ಏಕೈಕ ಗೋಲು ಶೊಟಾ ಯಮಾದಾ ಅವರ ಸ್ಟಿಕ್ನಿಂದ ಪಂದ್ಯದ ೧೫ನೇ ನಿಮಿಷದಲ್ಲಿ ಬಂದಿತು. ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು ೧೩-೦ ಗೋಲುಗಳ ಭರ್ಜರಿ ಗೆಲುವು ಸಂಪಾದಿಸಿದ್ದ ಭಾರತ ಎರಡನೇಯ ಪಂದ್ಯದಲ್ಲಿ ಚೀನದ ಎದುರು ೫-೨ ಗೋಲುಗಳ ಗೆಲುವು ದಾಖಲಿಸಿತ್ತು.
ಶುಕ್ರವಾರ ನಡೆದ ಇನ್ನೆರಡು ಪಂದ್ಯಗಳಲ್ಲಿ ಮಲೇಷ್ಯಾ ೬-೧ ಗೋಲುಗಳಿಂದ ಬಾಂಗ್ಲಾದೇಶವನ್ನು ಹಣಿದರೆ, ಕೊರಿಯಾ ಚಿನದೆದುರು ೨-೧ ಅಂತರದ ಜಯ ಸಾಧಿಸಿತು.

