ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜ ಪದವಿ ಪ್ರದಾನ ಸಮಾರಂಭ

ಹಂಚಿಕೊಳ್ಳಿ

ಧಾರವಾಡ
ಎಸ್.ಡಿ.ಎಮ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ 16ನೇ ಪದವಿ ಪ್ರದಾನ ಸಮಾರಂಭ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಹದಿನಾರನೇ ‘ಪದವಿ ಪ್ರದಾನ’ ಸಮಾರಂಭವು ಶನಿವಾರ ನಡೆಯಿತು.

ಬ್ರಹ್ಮೋಸ್ (ಡಿಆರ್‌ಡಿಒ)ದ ಮಹಾನಿರ್ದೇಶಕ, ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಜಯತೀರ್ಥ ಆರ್. ಜೋಶಿ ಮಾತನಾಡಿ, ಕೃತಕ ಬುದ್ಧಿಮತ್ತೆ ಮತ್ತು ಅಟೋಮೇಷನ್ ಗಳಂತಹ ಉದಯೋನ್ಮುಖ ಕ್ಷೇತ್ರಗಳು ಈಗಷ್ಟೇ ಪದವೀಧರಾಗಿರುವ ಇಂಜಿನಿಯರ್‌ಗಳಿಗೆ ಜಾಗತಿಕ ನಾವೀನ್ಯತೆ ಮತ್ತು ಸ್ವಾವಲಂಬನೆಯತ್ತ ಭಾರತವನ್ನು ಮುನ್ನಡೆಸಲು ಮಹತ್ತರ ಜವಾಬ್ದಾರಿ ಮತ್ತು ಅಪಾರ ಅವಕಾಶವನ್ನು ಒದಗಿಸುತ್ತವೆ ಎಂದರು.

ರಕ್ಷಣೆ, ಕೈಗಾರಿಕೆ, ಸಂಶೋಧನೆ, ಉದ್ಯಮಶೀಲತೆ ಮತ್ತು ಸಾರ್ವಜನಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ತಮ್ಮ ಕೈಲಾದ ಕೊಡುಗೆ ನೀಡಲು ಇಂಜಿನಿಯರ್‌ಗಳಿಗೆ ಉತ್ತಮ ಅವಕಾಶವಿದೆ, ಪದವೀಧರರಿಗೆ ತಾವು ಅರ್ಜಿಸಿಕೊಂಡ ಜ್ಞಾನವೇ ಅವರ ಶಕ್ತಿ, ಅವರಲ್ಲಿರುವ ನಾವೀನ್ಯತೆಯೇ ಅವರು ಕೊಡಬಹುದಾದ ಕೊಡುಗೆ ಮತ್ತು ಸಮಾಜದಲ್ಲಿ ಅವರು ತೋರ್ಪಡಿಸುವ ಪಾತ್ರವು ಅವರ ದೊಡ್ಡ ಆಸ್ತಿಯಾಗಿ ಉಳಿಯುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು ಎಂದರು.

ಎಸ್. ಡಿ. ಎಮ್. ಇ. ಸೊಸೈಟಿಯ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಕ್ಕೆ ಸುರಕ್ಷಿತ ಮತ್ತು ಸುಸ್ಥಿರ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಿರಂತರ ಕುತೂಹಲ, ವಿಮರ್ಶಾತ್ಮಕ ಚಿಂತನೆ ಮತ್ತು ಪರಿಸರಕ್ಕೆ ಸುಲಭವಾಗಿ ಒಗ್ಗುವುದನ್ನು ಅಳವಡಿಸಿಕೊಳ್ಳಲು ಪದವೀಧರರಿಗೆ ಸಲಹೆ ನೀಡಿದರು. ಎಸ್. ಡಿ. ಎಮ್. ಇಂಜಿನಿಯರಿಂಗ್ ಕಾಲೇಜಿನ ಮೌಲ್ಯಗಳು ಮತ್ತು ಪರಂಪರೆಯನ್ನು ಮುಂದುವರೆಸುವಲ್ಲಿ, ತಮ್ಮ ವೃತ್ತಿಜೀವನದಲ್ಲಿ ಕಾರ್ಯತತ್ಪರತೆ, ವಿನಮ್ರತೆ, ಮತ್ತು ಶ್ರೇಷ್ಠತೆಯನ್ನು ಪಾಲಿಸಲು ಕರೆಕೊಟ್ಟರು.

ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಕುಮಾರಿ ಭೂಮಿಕಾ ಚಂದ್ರಶೇಖರ ಸಜ್ಜನ್ ಅವರು 9.91 ಸಿ.ಜಿ.ಪಿ.ಎ. ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು, ಅವರಿಗೆ “ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ಚಿನ್ನದ ಪದಕ” ನೀಡಿ ಗೌರವಿಸಲಾಯಿತು.

ಪದವಿ ಪ್ರದಾನ ಸಮಾರಂಭದಲ್ಲಿ ಒಟ್ಟು 686 ಪದವಿ (UG), 27 ಸ್ನಾತಕೋತ್ತರ (PG) ಮತ್ತು 116 ಎಂ.ಬಿ.ಎ. ವಿದ್ಯಾರ್ಥಿಗಳು ತಮ್ಮ ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು. ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ದತ್ತಿ ಬಹುಮಾನ’ಗಳನ್ನು ನೀಡಿ ಪುರಸ್ಕರಿಸಲಾಯಿತು. ವಿ.ಟಿ.ಯು. ಮತ್ತು ಇತರ ವಿಶ್ವವಿದ್ಯಾಲಯಗಳಿಂದ ಪಿಎಚ್.ಡಿ. ಪದವಿ ಪಡೆದ ಒಟ್ಟು 9 ಅಭ್ಯರ್ಥಿಗಳಿಗೆ ಅಭಿನಂದನಾ ಪ್ರಮಾಣಪತ್ರಗಳನ್ನು ನೀಡಲಾಯಿತು.

ಅನಿತಾ ಸುರೇಂದ್ರ ಕುಮಾರ್, ಎಸ್‌.ಡಿ.ಎಮ್. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜೀವಂಧರ ಕುಮಾರ್ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ಯಿ. ಶ್ರೀಧರ್ ಸ್ವಾಗತಿಸಿದರು, ಪ್ರೊ. ಜೆ.ವಿ. ವಡವಿ ವಂದಿಸಿದರು. ಡಾ. ವಿಜಯ ಸಿ, ಡಾ. ಕೇಶವ ಜೋಶಿ, ಪ್ರೋ. ಸಾವಿತ್ರಿ ರಾಜು, ಡಾ. ಎಸ್. ಎಸ್. ಕೆರೂರ ಮತ್ತು ಎಲ್ಲಾ ವಿಭಾಗಾಧ್ಯಕ್ಷರುಗಳು ವೇದಿಕೆಯಲ್ಲಿದ್ದರು. ಪ್ರೋ. ಇಂದಿರಾ ಉಮರ್ಜಿ ನಿರೂಪಿಸಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *