ರಣಜಿ: ಅನೀಶ್‌ಗೆ ಚೊಚ್ಚಲ ಪ್ರಥಮ ದರ್ಜೆ ಶತಕ, `ಡ್ರೈವರ್ ಸೀಟ್’ ನಲ್ಲಿ ಕರ್ನಾಟಕ

ಹಂಚಿಕೊಳ್ಳಿ

ಗುವಾಹಟಿ
ಪ್ರತಿಭಾನ್ವಿತ ಬ್ಯಾಟರ್ ಕೆ.ವಿ. ಅನೀಶ್ ಅವರ ಚೊಚ್ಚಲ ಪ್ರಥಮ ದರ್ಜೆ ಸೆಂಚುರಿಯ ಸಹಾಯದಿಂದ ಕರ್ನಾಟಕ ತಂಡ ಇಲ್ಲಿ ಆಸ್ಸಾಂ ಎದುರು ನಡೆದಿರುವ ಎಲೀಟ್ ಗುಂಪಿನ ರಣಜಿ ಟ್ರೋಫಿ ಲೀಗ್ ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಆಟ ಬಾಕಿಯಿರುವಂತೆಯೇ ೩೬೧ ರನ್‌ಗಳ ಬೃಹತ್ ಲೀಡ್ ಸಂಪಾದಿಸಿತ್ತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಸಾಂ ಮೊದಲ ದಿನವೇ ೪೮.೧ ಓವರ್‌ಗಳಲ್ಲಿ ಕೇವಲ ೧೩೫ಕ್ಕೆ ಸರ್ವಪತನ ಕಂಡ ನಂತರ ಬ್ಯಾಟಿಂಗಿಗಿಳಿದ ಕರ್ನಾಟಕ ಮಂಗಳವಾರ ಎರಡನೇ ದಿನದ ಆಟ ಮುಗಿದಾಗ ತನ್ನ ಮೊದಲ ಸರದಿಯಲ್ಲಿ ೫ ವಿಕೆಟ್‌ಗಳಿಗೆ ೪೯೬ರ ಮೊತ್ತ ತಲುಪಿತ್ತು.

ಕರ್ನಾಟಕದ ಈ ಬೃಹತ್ ಮೊತ್ತಕ್ಕೆ ಕಾರಣರಾದ ಅನೀಶ್‌ರ ದಿನವಿಡೀ ಎದುರಾಳಿ ಬೌಲರ್‌ಗಳನ್ನು ದಂಡಿಸಿ ತಾವೆದುರಿಸಿದ ೨೪೮ ಎಸೆತಗಳಲ್ಲಿ ೧೦ ಬೌಂಡರಿ ಹಾಗೂ ೨ ಸಿಕ್ಸರ್‌ಗಳಿದ್ದ ೧೪೨ ರನ್ ಬಾರಿಸಿ ಔಟಾಗದೇ ಉಳಿದಿದ್ದಾರೆ.‌ ಇನ್ನೊಂದೆಡೆ ಅನೀಶ್ವರ ಗೌತಮ್ ಸಹ ತಾವೇನೂ ಕಡಿಮೆಯಿಲ್ಲವೆನ್ನುವಂತೆ ಅಬ್ಬರಿಸಿದರು.

ತ್ರಿಪುರಾ ಎದುರಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅನೀಶ್ವರ ಗೌತಮ ಮತ್ತೆ ಮಿಂಚಿದರು. ಶತಕದಿಂದ ಕೇವಲ ೧೭ ರನ್‌ಗಳ ದೂರದಲ್ಲಿದ್ದಾಗ ಎಡಗೈ ಸ್ಪಿನ್ನರ್ ರೋಶನ್ ಆಲಮ್ ಅವರ ಎಲ್.ಬಿ.ಡಬ್ಲೂö್ಯ. ಬಲೆಗೆ ಸಿಲುಕಿದ ಅವರು ೧೨೫ ಎಸೆತಗಳಲ್ಲಿ ೯ ಬೌಂಡರಿ ಹಾಗೂ ೩ ಸಿಕ್ಸರ್‌ಗಳಿದ್ದ ೮೩ ರನ್ ಹಣಿದರು. ಅನೀಶ್ವರ ಹಾಗೂ ಅನೀಶ್ ಐದನೇ ವಿಕೆಟ್ ಜೊತೆಯಾಟದಲ್ಲಿ ೨೩೯ ಎಸೆತಗಳಲ್ಲಿ ೧೪೮ ರನ್ ಕೂಡಿ ಹಾಕಿ ತಂಡಕ್ಕೆ ಸುಸ್ಥಿತಿಗೆ ಕಾರಣರಾದರು.

ಮತ್ತೆ ಮಿಂಚಿದ ಮನ್ವಂತ್‌ಕುಮಾರ;
ಅನೀಶ್ವರ್ ಔಟಾದ ನಂತರ ಬ್ಯಾಟಿಂಗಿಗೆ ಇಳಿದ ಮನ್ವಂತ್‌ಕುಮಾರ್ ಮತ್ತೊಮ್ಮೆ ಅಬ್ಬರಿಸಿದರು. ತಾವಾಡಿದ ಎರಡನೇ ರಣಜಿ ಪಂದ್ಯದಲ್ಲಿಯೇ ಸೆಂಚುರಿ ಸಿಡಿಸಿದ್ದ ಅವರು ೬೩ ಎಸೆತಗಳಲ್ಲಿ ೫ ಬೌಂಡರಿ ಹಾಗೂ ೨ ಸಿಕ್ಸರ್‌ಗಳಿದ್ದ ೫೩ ರನ್‌ಗಳಿಸಿ ದಿನದಾಟದ ಕೊನೆಗೆ ಔಟಾಗದೇ ಉಳಿದಿದ್ದಾರೆ. ಮುರಿಯದ ಆರನೇ ವಿಕೆಟ್‌ಗೆ ಅನೀಶ್ ಜೊತೆ ೧೩೬ ಎಸೆತಗಳಲ್ಲಿ ಅತ್ಯುಪಯುಕ್ತ ೯೫ ರನ್ ಸೇರಿಸಿರುವ ಅವರು ಬುಧವಾರ ಕರ್ನಾಟಕದ ಮುನ್ನಡೆಯನ್ನು ಇನ್ನೆಷ್ಟು ಹಿಗ್ಗಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.
ಆಸ್ಸಾಂ ಪರ ಆಫ್-ಬ್ರೇಕ್ ಬೌಲರ್ ಅಮ್ಲನ್‌ಜ್ಯೋತಿ ದಾಸ್(೨/೧೨೧) ಹಾಗೂ ಎಡಗೈ ಸ್ಪಿನ್ನರ ರೋಶನ್ ಆಲಮ್(೨/೧೨೬) ತಲಾ ಎರಡೆರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರುಗಳು: ಆಸ್ಸಾಂ ೪೮.೧ ಓವರ್‌ಗಳಲ್ಲಿ ೧೩೫, ಕರ್ನಾಟಕ: ೧೧೭ ಓವರ್‌ಗಳಲ್ಲಿ ೫ ವಿಕೆಟ್‌ಗಳಿಗೆ ೪೯೬.


ಹಂಚಿಕೊಳ್ಳಿ

Leave a Reply

Your email address will not be published. Required fields are marked *