ಧಾರವಾಡ
ರಾಜ್ಯದಲ್ಲಿ ಹಾಲು ಮತ್ತು ಬಸ್ ದರ ಹೆಚ್ಚಳ ಮಾಡಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ, ಬಿಜೆಪಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಹಳೇ ಬಸ್ ನಿಲ್ದಾಣದ ಸಮೀಪವಿರುವ ಮಹಾರಾಣಾ ಪ್ರತಾಪ್ ಸಿಂಹ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ‘ಕಾಂಗ್ರೆಸ್ ಸರ್ಕಾರ ಸರಣಿ ಬೆಲೆ ಏರಿಕೆ ಮಾಡುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಸರ್ಕಾರವು ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನಹರಿಸದೇ ಬರೀ ಜನರ ಹಣವನ್ನು ಲೂಟಿ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಬೆಲೆ ಏರಿಕೆ ಸಾಮಾನ್ಯವಾಗುತ್ತದೆ. ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತು ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಷ್ಟಕ್ಕೇ ನಿಲ್ಲದೆ, ಇನ್ನು ಕೆಲವೇ ದಿನಗಳಲ್ಲಿ ಮುದ್ರಾಂಕ ಶುಲ್ಕವನ್ನೂ ಸಹ ಹೆಚ್ಚಳ ಮಾಡಲು ಆಲೋಚಿಸುತ್ತಿದೆ. ಈ ಸರ್ಕಾರ ಸಾರ್ವಜನಿಕರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಅಲಕ್ಷಿಸಿದೆ’ ಎಂದು ಕಿಡಿಕಾರಿದರು.
ಮಹಾನಗರ ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಜ್ಯೋತಿ ಪಾಟೀಲ, ಮಂಜುನಾಥ ಬಟ್ಟೆಣ್ಣವರ, ನೀಲಮ್ಮ ಅರವಾಳದ, ಚಂದ್ರಕಲಾ ಕೊಟಬಾಗಿ, ಸುರೇಶ ಬೇದರೆ, ಶಂಕರ ಶಳಕೆ, ಮುಖಂಡರಾದ ವಿಜಯಾನಂದ ಶೆಟ್ಟಿ, ಬಸವರಾಜ ಗರಗ, ಸಂಜಯ ಕಪಟಕರ, ಚಂದ್ರಶೇಖರ ಮನಗುಂಡಿ, ದೇವರಾಜ ಶಹಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

