ಧಾರವಾಡ
ಉದ್ಯಮ ರಂಗದ ನಿರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳು ವೃತ್ತಿಪರ ಕೌಶಲ್ಯ, ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ ಎಂದು ಅಗ್ರಿ-ಬಿಸಿನೆಸ್ ಮತ್ತು ಸಸ್ಟೈನಬಿಲಿಟಿ ಲೀಡ್ ಸಂಜೀವ್ ರಾಥೋಡ್ ಹೇಳಿದರು.
ನಗರದ ಜೆಎಸ್ಎಸ್ ಡಾ. ಡಿ. ವೀರೇಂದ್ರ ಹೆಗ್ಗಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್ ಸಂಸ್ಥೆಯಲ್ಲಿ 2026-28ನೇ ಸಾಲಿನ ಎಂಬಿಎ ವಿದ್ಯಾರ್ಥಿಗಳ ಪ್ರವೇಶಾತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ‘ಸಾಮರ್ಥ್ಯ ಅಭಿವೃದ್ಧಿ’ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸ್ವಯಂ ಜಾಗೃತಿ, ವ್ಯಕ್ತಿತ್ವ ವಿಕಸನ ಹಾಗೂ ಉದ್ಯಮ ರಂಗದ ನಿರೀಕ್ಷೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಹೇಗೆ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳ ನಡವಳಿಕೆ ಮತ್ತು ವ್ಯಕ್ತಿತ್ವದ ಗುಣಲಕ್ಷಣಗಳನ್ನು ಅರಿಯಲು ಸಹಕಾರಿಯಾಗುವ DISC ಮಾದರಿಯನ್ನು ಪರಿಚಯಿಸಿದರು. ‘ನಿಮಗೆ ಯಶಸ್ಸು ಬೇಕೇ ಅಥವಾ ಮಹತ್ವದ ಜೀವನವನ್ನು ನಡೆಸಲು ಬಯಸುತ್ತೀರಾ?’ ಎಂಬ ಪ್ರಶ್ನೆಯ ಮೂಲಕ ವಿದ್ಯಾರ್ಥಿಗಳು ತಮ್ಮ ದೀರ್ಘಾವಧಿಯ ಗುರಿ ಹಾಗೂ ವೈಯಕ್ತಿಕ ಮೌಲ್ಯಗಳ ಕುರಿತು ಚಿಂತಿಸುವಂತೆ ಮಾಡಿದರು.
ಸಂವಾದಾತ್ಮಕವಾಗಿ ನಡೆದ ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಸನ ಹಾಗೂ ಅರ್ಥಪೂರ್ಣ ಜೀವನದ ಗುರಿ ರೂಪಿಸಿಕೊಳ್ಳುವ ಮನೋಭಾವ ಬೆಳೆಸುವಲ್ಲಿ ಸಹಕಾರಿಯಾಯಿತು.
