ಬೆಳಗಾವಿ
ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಸಂರಕ್ಷಣೆ ಮತ್ತು ಪ್ರಸಾರದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಇತಿಹಾಸ ಪ್ರಸಿದ್ಧ ನಾಗನೂರು ಶ್ರೀ ರುದ್ರಾಕ್ಷಿಮಠದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಕನ್ನಡ ನುಡಿಶ್ರೀ’ ಪ್ರಶಸ್ತಿಗೆ ಸುವರ್ಣ ಸುದ್ದಿವಾಹಿನಿಯ ಬೆಳಗಾವಿ ವರದಿಗಾರ ಅನಿಲ ಕಾಜಗಾರ ಆಯ್ಕೆಯಾಗಿದ್ದಾರೆ.
ಪರಮಪೂಜ್ಯ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮೀಜಿಗಳ 137ನೇ ಜಯಂತ್ಯುತ್ಸವದ ಅಂಗವಾಗಿ ಇದೇ ಡಿಸೆಂಬರ್ 6ರಂದು ಸಂಜೆ 6 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಉತ್ತರ ಕರ್ನಾಟಕದ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ನಾಗನೂರು ಶ್ರೀ ರುದ್ರಾಕ್ಷಿಮಠವು ಕನ್ನಡಪರ ಚಟುವಟಿಕೆಗಳ ಮೂಲಕವೂ ಗುರುತಿಸಿಕೊಂಡಿದೆ. ಬೆಳಗಾವಿಯಲ್ಲಿ ಕನ್ನಡದ ಅಸ್ಮಿತೆ ಮತ್ತು ಭಾಷಾಭಿಮಾನ ಬೆಳೆಸುವಲ್ಲಿ ಮಠದ ಕೊಡುಗೆ ಸ್ಮರಣೀಯವಾಗಿದೆ.
ನಾಗನೂರು ಶ್ರೀ ಶಿವಬಸವ ಸ್ವಾಮೀಜಿಗಳಿಂದ ಆರಂಭವಾದ ಕನ್ನಡಪರ ಆಶಯಗಳನ್ನು ಮುಂದುವರಿಸಿಕೊಂಡು ಬಂದ ಸಿದ್ಧರಾಮ ಶ್ರೀಗಳು ಹಾಗೂ ಪ್ರಸ್ತುತ ಪೀಠಾಧಿಪತಿ ಡಾ. ಅಲ್ಲಮಪ್ರಭು ಶ್ರೀಗಳ ಮಾರ್ಗದರ್ಶನದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಸೇವೆಯನ್ನು ಗುರುತಿಸಿ ಅನೇಕ ಗಣ್ಯರಿಗೆ ಈ ಹಿಂದೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಬಾರಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅನಿಲ ಕಾಜಗಾರ ಅವರಿಗೆ ಪ್ರಶಸ್ತಿ ಲಭಿಸಿರುವುದು ಅವರ ವೃತ್ತಿಪರ ಸೇವೆಗೆ ಸಂದ ಗೌರವವಾಗಿದೆ.
ಕನ್ನಡದ ನೆಲ, ನುಡಿ ಮತ್ತು ಸಂಸ್ಕೃತಿಯ ಆರಾಧನೆಯೊಂದಿಗೆ ಧಾರ್ಮಿಕ ಪರಂಪರೆಯನ್ನು ಬೆಸೆದುಕೊಂಡಿರುವ ನಾಗನೂರು ರುದ್ರಾಕ್ಷಿಮಠದ ಈ ಗೌರವವು ಕನ್ನಡ ಸೇವೆಯ ಮಹತ್ವವನ್ನು ಮತ್ತೊಮ್ಮೆ ಸಾರಿದೆ.
