ಜೆಎಸ್ಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಸಂಭ್ರಮದ ಆಚರಣೆ
ಧಾರವಾಡ
ಅಜ್ಞಾನವೆಂಬ ಕತ್ತಲೆಯನ್ನು ದೂರ ಮಾಡಿ, ಜ್ಞಾನವೆಂಬ ಬೆಳಕನ್ನು ಜೀವನದಲ್ಲಿ ಬೆಳಗಿಸುವ ಸಾರ್ಥಕ ಸಂಕೇತವೇ ದೀಪಾವಳಿ. ಪ್ರೀತಿ, ಸೌಹಾರ್ದತೆ, ಸಂತೋಷ ಹಾಗೂ ಧನಾತ್ಮಕ ಚಿಂತನೆಗಳನ್ನು ಪ್ರತಿಯೊಬ್ಬರ ಮನದಲ್ಲಿ ತುಂಬುವ ಬೆಳಕಿನ ಹಬ್ಬವನ್ನು ಧಾರವಾಡದ ವಿದ್ಯಾಗಿರಿಯಲ್ಲಿರುವ ಜೆಎಸ್ಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಅತ್ಯಂತ ಸಂಭ್ರಮದಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಶಾಲೆಯ ಆವರಣದಲ್ಲಿ ವಿಶೇಷ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಹೊಸ ಬಟ್ಟೆಗಳನ್ನು ಧರಿಸಿ ಶಾಲೆಗೆ ಆಗಮಿಸಿದ ಮಕ್ಕಳು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ನಗು, ಸಂತಸ ಹಾಗೂ ಮಕ್ಕಳ ಕಲರವದೊಂದಿಗೆ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.
ದೀಪಾವಳಿಯ ಮಹತ್ವ, ಬೆಳಕಿನ ಹಬ್ಬ ಸಾರುವ ಸಂದೇಶ ಹಾಗೂ ಜೀವನದಲ್ಲಿ ಪ್ರೀತಿ, ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಜನತಾ ಶಿಕ್ಷಣ ಸಮಿತಿಯ ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಕೇಂದ್ರಿಯ ಶಾಲೆಯ ಪ್ರಾಚಾರ್ಯೆ ರಜನಿ ಪಾಟೀಲ, ಆಂಗ್ಲ ಮಾಧ್ಯಮ ಶಾಲೆಯ ಡಯಾನಾ, ಮೈನಾ ದಿವಟೆ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ ಪಿ.ಎಸ್. ಸುಧಾಮಣಿ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಹಬ್ಬದ ಆಚರಣೆಯು ಮಕ್ಕಳಲ್ಲಿ ಸಂತಸ ಮೂಡಿಸುವುದರ ಜೊತೆಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಹಬ್ಬಗಳ ಹಿಂದಿರುವ ಜೀವನ ಮೌಲ್ಯಗಳನ್ನು ಪರಿಚಯಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಿ ಗಮನ ಸೆಳೆಯಿತು.
