ಲಿಂಕನ್
ಸೋಮವಾರ ದಿನವಿಡೀ ಬಿದ್ದ ಮಳೆಯ ಕಾರಣದಿಂದಾಗಿ ಪ್ರವಾಸಿ ಭಾರತ(ಎ) ಹಾಗೂ ನ್ಯೂಜಿಲೆಂಡ್(ಎ) ತಂಡಗಳ ನಡುವೆ ಲಿಂಕನ್ ವಿಶ್ವವಿದ್ಯಾಲಯದ ಆವರಣದಲ್ಲಿರುವ ಬರ್ಟ್ ಸಟ್ಕ್ಲಿಫ್ ಓವಲ್ನಲ್ಲಿ ನಡೆದಿರುವ ನಾಲ್ಕು ದಿನಗಳ ೩ನೇ ಅನಧಿಕೃತ ಟೆಸ್ಟ್’ ಪಂದ್ಯದ ಮೂರನೇ ದಿನದ ಆಟವನ್ನು ರದ್ದು ಮಾಡಬೇಕಾಯಿತು.
ಇದರಿಂದಾಗಿ ಮೂರು ಅನಧಿಕೃತ ಟೆಸ್ಟ್ ಪಂದ್ಯಗಳ ಸರಣಿಯ ಕೊನೆಯ ಪಂದ್ಯ ಖಚಿತವಾಗಿಯೂ ಡ್ರಾ ಹಾದಿ ಹಿಡಿದಿದೆಯಲ್ಲದೇ, ಇದೇ ನವೆಂಬರ್ ೧೯ರಿಂದ ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ನಲ್ಲಿ ಪ್ರಾರಂಭವಾಗಲಿರುವ ಹಿರಿಯರ ತಂಡದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕಾಗಿ ಭಾರತದ ಬೌಲರ್ಗಳಿಗೆ ದೊರಕಬಹುದಾಗಿದ್ದ ಅತ್ಯಮೂಲ್ಯ ಅಭ್ಯಾಸ ಕೈತಪ್ಪಿ ಹೋದಂತಾಯಿತು.
ಗಾಯ ಮೊದಲಾದ ಕಾರಣಗಳಿಂದಾಗಿ ಭಾರತ ತಂಡದಿಂದ ಹೊರಗಿರುವ ಪ್ರಮುಖ ಬೌಲರ್ಗಳಾದ ಜಸ್ಪಿತ್ ಬುಮ್ರಾ, ರವೀಂದ್ರ ಜಡೇಜಾ ಹಾಗೂ ಪ್ರಸಿದ್ಧ ಕೃಷ್ಣ ಅವರ ಸಿದ್ಧತೆಯನ್ನು ಪರೀಕ್ಷಿಸುವ ಅವಕಾಶವೂ ಇದರಿಂದಾಗಿ ಕೈ ತಪ್ಪಿ ಹೋದಂತಾಗಿದೆ.
ನಾಲ್ಕು ದಿನಗಳ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ(ಎ) ತಂಡ ಎಡಗೈ ಪ್ರಾರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(೧೦೨, ೧೩೮ ಎಸೆತ, ೧೬ ಬೌಂಡರಿ, ೨ ಸಿಕ್ಸರ್) ಅವರ ಸೊಗಸಾದ ಶತಕ ಹಾಗೂ ಧ್ರುವ್ ಜುರೇಲ್(೭೧, ೯೫ ಎಸೆತ, ೯ ಬೌಂಡರಿ, ೨ ಸಿಕ್ಸರ್), ತಿಲಕ್ ವರ್ಮಾ(ಔಟಾಗದೇ ೮೧, ೧೬೪ ಎಸೆತ, ೫ ಬೌಂಡರಿ, ೨ ಸಿಕ್ಸರ್) ಹಾಗೂ ವಾಷಿಂಗ್ಟನ್ ಸುಂದರ್(ಔಟಾಗದೇ ೫೦, ೧೦೭ ಎಸೆತ, ೨ ಬೌಂಡರಿ) ಅವರುಗಳು ಉಪಯುಕ್ತ ಅರ್ಧ ಶತಕಗಳ ನೆರವಿನಿಂದ ೫ ವಿಕೆಟ್ಗಳಿಗೆ ೪೬೪ ರ ಮೊತ್ತ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು.
ಆ ನಂತರ ದೊರೆತ ೧೪ ಓವರ್ಗಳ ಅವಧಿಯಲ್ಲಿ ನ್ಯೂಜಿಲೆಂಡ್(ಎ) ತಂಡ ೩೬ ರನ್ ಗಳಿಸಿದ್ದು ಎರಡು ವಿಕೆಟ್ಗಳನ್ನು ಕಳೆದುಕೊಂಡಿದೆ. ವೆಸ್ಟ್ ಇಂಡೀಸ್ ಎದುರು ಸಪ್ಟಂಬರ್ ೩೦ ರಂದು ನಡೆದ ಪಂದ್ಯದಲ್ಲಿ ಮಾಡಿಕೊಂಡಿದ್ದ ಗಾಯದಿಂದ ಚೇತರಿಸಿಕೊಂಡು ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿರುವ ವೇಗಿ, ಕನ್ನಡಿಗ ಪ್ರಸಿದ್ಧ ಕೃಷ್ಣ ಆ ಎರಡೂ ವಿಕೆಟ್ ಪಡೆದುಕೊಂಡಿದ್ದು ಆಯ್ಕೆದಾರರಿಗೆ ಸಂತಸ ತಂದಿರಲೇ ಬೇಕು.

