ಅಲ್ ಅಮರತ್
“ತಂದೆ, ಭಾರತದ ಬಿರುಸಿನ ಪ್ರಾರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರಿಗೆ ದೊಡ್ಡ ಶತಕದ ಭರವಸೆ ನೀಡಿದ್ದೆ”- ಹೀಗೆ ನುಡಿದವರು ಭಾರತದ ಯುವ ಪ್ರಾರಂಭಿಕ ಬ್ಯಾಟರ್ ಆರ್ಯವೀರ ಸೆಹ್ವಾಗ್.
ಮಂಗಳವಾರ ಇಲ್ಲಿ ನಡೆದ ೧೯ ವರ್ಷದವರೊಳಗಿನ ಏಷ್ಯಾ ಕಪ್ನ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಯು.ಎ.ಇ. ಎದುರು ಭರ್ಜರಿ ೧೬೦ ರನ್ ಸಿಡಿಸಿ ಭಾರತಕ್ಕೆ ೭೦ ರನ್ಗಳ ಗೆಲುವನ್ನೂ ತಂದಿತ್ತು. ಸೆಮಿಫೈನಲ್ಗೆ ಕೊಂಡೊಯ್ದ ನಂತರ ಅವರು ಹೀಗೆ ನುಡಿದಿದ್ದಾರೆ. ತಾವೆದುರಿಸಿದ ೧೬೮ ಎಸೆತಗಳಲ್ಲಿ ೧೭ ಬೌಂಡರಿ ಹಾಗೂ ೭ ಸಿಕ್ಸರ್ ಸಿಡಿಸಿದ ಆರ್ಯವೀರ್, “ತಿರುವು ಪಡೆಯುತ್ತಿದ್ದ ಪಿಚ್ನಲ್ಲಿ ದೀರ್ಘ ಸರದಿ ಆಡಲು ಬಯಸಿದ್ದೆ” ಎಂದಿದ್ದಾರೆ.
“ನಾನು ಆರಂಭದಿಂದಲೇ ಕನಿಷ್ಟ ೪೦ ಓವರ್ಗಳ ಕಾಲ ಬ್ಯಾಟ್ ಮಾಡಬೇಕಂತಲೇ ನಿರ್ಧರಿಸಿದ್ದೆ. ಪಿಚ್ ಸುಲಭದ್ದಾಗಿರಲಿಲ್ಲ. ಅದರಲ್ಲಿ ಹಲವು ಸವಾಲುಗಳಿದ್ದವು. ಡಾಟ್ ಬಾಲ್ಗಳ ಬಗ್ಗೆಯೂ ತಲೆ ಕೆಡಿಸಿಕೊಳ್ಳಲಿಲ್ಲ. ಅದನ್ನು ನಂತರ ಕವರ್ ಮಾಡಿಕೊಳ್ಳಬಹುದು ಎಂದು ಗೊತ್ತಿತ್ತು. ದೊಡ್ಡ ಸ್ಕೋರ್ ಮಾಡಬೇಕು ಎಂದುಕೊಂಡಿದ್ದೆ”, ಯು.ಎ.ಇ. ಎದುರಿನ ಪಂದ್ಯದ ನಂತರ ಆರ್ಯವೀರ್ ನುಡಿದರು.

“ಇಂದು ದೊಡ್ಡ ಸ್ಕೋರ್ ಮಾಡುತ್ತೇನೆ ಎಂದು ಅಪ್ಪನಿಗೆ ಭರವಸೆ ಕೊಟ್ಟಿದ್ದೆ. ಅದೃಷ್ಟವಶಾತ್ ಅದನ್ನು ಮಾಡಿದ್ದೇನೆ. ಅವರಿಗೆ ದೊಡ್ಡ ಶತಕಗಳು ಮಾತ್ರ ಇಷ್ಟ. ಅವರ ಪರಂಪರೆ ಉಳಿಸಿಕೊಳ್ಳಬೇಕಿದೆ”, ೧೮ ವರ್ಷ ವಯಸ್ಸಿನ ಆರ್ಯವೀರ್ ನುಡಿದಿದ್ದಾರೆ.
ಆರ್ಯವೀರ್ ಅವರ ಅಬ್ಬರದ ಶತಕ ಹಾಗೂ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ ವಿ.ಕೆ. ವಿನೀತ್(೬೭, ೬೯ ಎಸೆತ) ಅವರೊಡನೆ ಕೂಡಿಹಾಕಿದ್ದ ೧೯೩ ರನ್ಗಳ ನೆರವಿನಿಂದ ಭಾರತ ಒಂದು ಹಂತದಲ್ಲಿ ೧ ವಿಕೆಟ್ಗೆ ೨೫೫ರ ಮೊತ್ತ ತಲುಪಿತ್ತು. ಆದರೆ ಅಂತಿಮ ಹಂತದಲ್ಲಿ ಯು.ಎ.ಇ. ಮಧ್ಯಮವೇಗಿ ನಸೀಮ್ ಖಾನ್(೧೦ ಓವರ್ಗಳಲ್ಲಿ ೪೮ ರನ್ಗಳಿಗೆ ೪ ವಿಕೆಟ್) ಎದುರು ಕುಸಿದು ೫೪ ರನ್ಗಳಿಗೆ ೬ ವಿಕೆಟ್ ಕಳೆದುಕೊಂಡು ಒಟ್ಟು ೭ ವಿಕೆಟ್ಗಳಿಗೆ ೩೦೯ರ ಸ್ಕೋರು ದಾಖಲಿಸಿತು.
ಉತ್ತರವಾಗಿ ಬಲಗೈ ವೇಗಿ ಇಶಾನ್ ಸೂದ್(೭ ಓವರ್ಗಳಲ್ಲಿ ೩೭ ರನ್ಗಳಿಗೆ ೪ ವಿಕೆಟ್) ಎದುರು ಪರದಾಡಿದ ಯು.ಎ.ಇ. ತಂಡ ಅಹ್ಮದ್ ಖುದಾದಾದ್(೭೪, ೭೪ ಎಸೆತ) ಹಾಗೂ ನೂರುಲ್ಲಾ ಅಯೋಬಿ(೩೯. ೨೫ ಎಸೆತ) ಹೋರಾಟದ ಸರದಿಗಳ ಹೊರತಾಗಿಯೂ ೨೩೯ ರನ್ಗಳಿಗೆ ಸರ್ವಪತನ ಕಂಡಿತು.
ಈ ಗೆಲುವಿನೊಂದಿಗೆ ಎಂಟು ಬಾರಿಯ ಚಾಂಪಿಯನ್ಸ್ ಭಾರತ ಸೆಮಿಫೈನಲ್ಸ್ಗೆ ಲಗ್ಗೆಯಿಟ್ಟಿದ್ದು ಗುರುವಾರ ಅಪ್ಘಾನಿಸ್ತಾನವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಪಾಕಿಸ್ತಾನ ಬಾಂಗ್ಲಾದೇಶವನ್ನು ಎದುರಿಸಲಿದೆ.

