70 ಜೂಜಾಟ ಪ್ರಕರಣ ದಾಖಲು; 491 ಆರೋಪಿಗಳ ಬಂಧನ
₹3.36 ಲಕ್ಷ ನಗದು ಜಪ್ತಿ; ಮೂರು ದಿನಗಳಲ್ಲಿ ಜಿಲ್ಲೆಯಾದ್ಯಂತ ವಿಶೇಷ ದಾಳಿ
ಧಾರವಾಡ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಕ್ರಮ ಇಸ್ಪೀಟ್ ಜೂಜಾಟಕ್ಕೆ ಕಡಿವಾಣ ಹಾಕಲು ಧಾರವಾಡ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಕೇವಲ ಮೂರು ದಿನಗಳಲ್ಲಿ ಒಟ್ಟು 70 ಜೂಜಾಟ ಪ್ರಕರಣಗಳನ್ನು ದಾಖಲಿಸಿ, 491 ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ, ಜೂಜಾಟಕ್ಕೆ ಬಳಸಲಾಗಿದ್ದ ₹3,36,890 ನಗದನ್ನು ಜಪ್ತಿ ಮಾಡಿದ್ದಾರೆ.
ನವೆಂಬರ್ 9ರಿಂದ 11ರವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ, ಸಿಪಿಐ, ಪಿಐ ಹಾಗೂ ಪಿಎಸ್ಐ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿ, ಅಕ್ರಮ ಜೂಜಾಟದಲ್ಲಿ ತೊಡಗಿರುವವರ ಕುರಿತು ಮಾಹಿತಿ ಸಂಗ್ರಹಿಸಿ ದಾಳಿ ನಡೆಸಲಾಗಿದೆ.
ಯಾವ ಠಾಣೆ ವ್ಯಾಪ್ತಿಯಲ್ಲಿ ಎಷ್ಟು ಪ್ರಕರಣ?
• ಗರಗ ಪೊಲೀಸ್ ಠಾಣೆ – 12 ಪ್ರಕರಣ
• ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ – 10 ಪ್ರಕರಣ
• ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ – 9 ಪ್ರಕರಣ
• ನವಲಗುಂದ ಪೊಲೀಸ್ ಠಾಣೆ – 9 ಪ್ರಕರಣ
• ಅಣ್ಣಿಗೇರಿ ಪೊಲೀಸ್ ಠಾಣೆ – 9 ಪ್ರಕರಣ
ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 70 ಪ್ರಕರಣಗಳನ್ನು ದಾಖಲಿಸಿ, 491 ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಪೊಲೀಸರು ಕೈಗೊಂಡ ಈ ವಿಶೇಷ ಕಾರ್ಯಾಚರಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
