ಬಸವ ಕೇಂದ್ರದಿಂದ ಬಸವ ಭಾಷೆ ಪ್ರವಚನ

ಹಂಚಿಕೊಳ್ಳಿ

ನವೆಂಬರ್ ೧೫ರಿಂದ ಡಿಸೆಂಬರ್ ೧೩ರ ವರೆಗೆ ಹುಬ್ಬಳ್ಳಿ ಗೋಕುಲ ರಸ್ತೆಯ ಸರಕಾರಿ ಶಾಲಾ ಆವರಣದಲ್ಲಿ ಸಂಜೆ ೬ ರಿಂದ ೮ ರ ವರೆಗೆ

ಹುಬ್ಬಳ್ಳಿ
ಕೆರೆ ಹಳ್ಳ ಬಾವಿಗಳು ಮೈದೆಗೆದರೆ, ಗುಳ್ಳೆ ಗೊರಜೆ ಚಿಪ್ಪುಗಳ ಕಾಣಬಹುದು, ವಾರಿಧಿಯು ಮೈದೆರೆದರೆ ಮುತ್ತು-ರತ್ನಂಗಳ ಕಾಣಬಹುದು, ಕೂಡಲಸಂಗನ ಶರಣರು, ಮನದೆರೆದು ಮಾತನಾಡಿದರೆ ಲಿಂಗವ ಕಾಣಬಹುದು. ಮನುಷ್ಯ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಸಿಲುಕಿ ತೊಂದರೆ ತಾಪತ್ರಯಗಳಿಗೆ ಈಡಾಗಿದ್ದಾನೆ. ಮನುಷ್ಯನ ಸಹಜ ಬದುಕಿಗೆ ಕುಂದು ಉಂಟಾಗಿದೆ.

ಇಂದಿನ ಸಾಮಾಜಿಕ, ರಾಜಕೀಯ, ಆರ್ಥಿಕ ಒತ್ತಡದಿಂದ ಮಾನವರ ಬದುಕು ಡೋಲಾಯಮಾನವಾಗಿದೆ. ಮೊಸ-ವಂಚನೆ, ದ್ವೇಷ-ಅಸೂಹೆ, ಅನೀತಿ-ಅನ್ಯಾಯ, ಸಾವು-ನೋವು, ಮೊದಲಾದವುಗಳು ತುಂಬಿ ತುಳುಕುತ್ತಿರುವ ಇಂದಿನ ಅಂಧಮಯ ದಿನಮಾನದಲ್ಲಿ ಬೆಳಕಾಗಿ ತೋರುತ್ತಿರುವುದು ಶರಣತತ್ವ. ಶರಣರ ವಿಚಾರಗಳಲ್ಲಿದೆ ಸಮಸ್ಯೆಗಳಿಗೆ ಪರಿಹಾರ. ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಇರುವ ಮಾರ್ಗ ಮನುಷ್ಯ ಧರ್ಮದತ್ತ್ತ ವಾಲುವುದು. ೧೨ನೇ ಶತಮಾನದ ಶರಣರು ಮಾನವರ ಸರ್ವತೋಮುಖ ಅಭಿವೃದ್ಧಿಗಾಗಿ ಚಿಂತಿಸಿದರು ಮಾತ್ರವಲ್ಲ ಅವರು ಮಾನಸಿಕ ನೆಮ್ಮದಿಗೆ ಬೇಕಾದ ತನು ಶುಚಿ, ಮನ ಶುಚಿ, ಭಾವ ಶುಚಿ ಮಾರ್ಗಗಳನ್ನು ತೋರಿದರು. ನುಡಿದಂತೆ-ನಡೆದುದು ಶರಣರ ಹೆಗ್ಗಳಿಕೆ.

ಬಸವಪ್ರಣೀತ ಲಿಂಗಾಯತ ಧರ್ಮ ಒಂದು ವಿಶ್ವಧರ್ಮ, ಸರ್ವರೂ ಆಚರಿಸಬಹುದಾದ ಸರಳ, ಸಹಜ ಧರ್ಮ. ಕಾಯಕ ದಾಸೋಹದ ಸಹಜ ಪ್ರಧಾನ ಧರ್ಮ. ಏಕ ದೇವೋಪಾಸನೆ ಧರ್ಮ. ದೇಹವೇ ದೇವಾಲಯವನ್ನಾಗಿ ಮಾಡಿಕೊಂಡು ದೇವರನ್ನು ತನ್ನೋಳಗೆ ಅನುಭವಿಸುವ ಧರ್ಮ. ತನುಶುಚಿ, ಮನಶುಚಿ, ಭಾವಶುಚಿಗೊಳ್ಳಬೇಕಾದರೆ ಶರಣರ ತತ್ವಚಿಂತನೆ ಅತ್ಯವಶ್ಯ. ಶರಣರ ವಚನಗಳಲ್ಲಿರುವ ತತ್ವಗಳನ್ನು ಜನರಿಗೆ ತಲುಪಿಸಲು ಹುಬ್ಬಳ್ಳಿಯ ಬಸವಕೇಂದ್ರ ಹಲವು ಹತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಮನೆಯಲ್ಲಿ ಮಹಾಮನೆಯ ಮೂಲಕ ಒಂದೊಂದು ಮನೆಯಲ್ಲಿ ಶರಣರ ವಚನಗಳ ಚಿಂತನೆ ಮಾಡಲಾಗುತ್ತಿದೆ. ಶರಣ ಸಂಗಮ ಕಾರ್ಯಕ್ರಮದ ಅಂಗವಾಗಿ ತಿಂಗಳಿಗೆ ಒಮ್ಮೆ ಎಲ್ಲರೂ ಒಂದೆಡೆ ಸೇರಿ-ಶರಣರ ಅನುಭಾವಿಗಳ ಮೂಲಕ ಶರಣರ ವಚನಗಳ ವಿಶ್ಲೇಷಣೆ ಮಾಡಲಾಗುತ್ತಿದೆ. ಹಾಗೆಯೇ ಶ್ರಾವಣ ಮಾಸದಲ್ಲಿ ಇಡಿ ತಿಂಗಳ ಪರ್ಯಂತರ ವಚನ ಶ್ರಾವಣ ಕಾರ್ಯಕ್ರಮ ಹುಬ್ಬಳ್ಳಿಯ ಬೇರೆ ಬೇರೆ ಬಡಾವಣೆಗಳಲ್ಲಿ ಅನುಭಾವಿಗಳ ಮೂಲಕ ಶರಣರ ಚಿಂತನೆಯ ಮಂಥನ ನಡೆಯುತ್ತಿದೆ.

ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಶರಣರ ಚಿಂತನೆಗಳ ತಿಳುವಳಿಕೆ ಮಾಡುವ ಉದ್ದೇಶದಿಂದ ಪ್ರತಿ ವರ್ಷವು ಪ್ರಾಥಮಿಕ, ಹಿರಿಯ ಪ್ರಾಥಮಿಕ, ಹಾಗೂ ಮಾಧ್ಯಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ವಚನ ಸ್ಪರ್ಧೆ, ನಿಬಂಧ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದೆ.
ಬಸವಕೇಂದ್ರವು ಪ್ರತಿ ವರ್ಷ ವಾರ್ಷಿಕೋತ್ಸವದ ಅಂಗವಾಗಿ ತಿಂಗಳ ಪರ್ಯಂತರ ಪ್ರವಚನ ಕಾರ್ಯಕ್ರಮವನ್ನು ೨೦೦೮ ರಿಂದ ಹಮ್ಮಿಕೊಳ್ಳುತ್ತಾ ಬಂದಿದೆ.

೨೦೦೮ ರಲ್ಲಿ ಮನಗುಂಡಿಯ ಶ್ರೀ ಬಸವಾನಂದ ಸ್ವಾಮಿಗಳು, ೨೦೦೯ರಲ್ಲಿ ಬೀದರಿನ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿಯವರು, ೨೦೧೦ ರಲ್ಲಿ ಚಿತ್ರದುರ್ಗದ ಶ್ರೀ ಬಸವ ನವಲಿಂಗ ಶರಣರು, ೨೦೧೧ ರಲ್ಲಿ ಹಿರೇಹೊನ್ನಳ್ಳಿ ಶ್ರೀ ಶರಣಬಸವ ದೇವರು, ೨೦೧೨ ರಲ್ಲಿ ಮತ್ತೆ ಬೀದರಿನ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿಯವರು. ೨೦೧೩ ರಲ್ಲಿ ಗದುಗಿನ ತೋಂಟದಾರ್ಯ ಮಠದ ಶ್ರೀ ಮಹಾಂತಸ್ವಾಮೀಜಿಯವರು. ೨೦೧೪ ರಲ್ಲಿ ಮುಂಡಗೋಡ ತಾಲೂಕು ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ, ೨೦೧೫ ರಲ್ಲಿ ಬಸವಕಲ್ಯಾಣದ ಅನುಭವ ಮಂಟಪದ ಶ್ರೀ ರೇವಣಸಿದ್ಧಸ್ವಾಮಿಗಳವರು. ೨೦೧೬ ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಬಸವಾಶ್ರಮದ ಮಾತೆ ಶರಣಾಂಬಿಕೆ ಅವರು. ೨೦೧೭ ರಲ್ಲಿ ಜಮಖಂಡಿ ತಾಲೂಕು ಹುನ್ನೂರ-ಮಧುರಖಂಡಿಯ ಬಸವಜ್ಞಾನ ಗುರುಕುಲದ ಅಧ್ಯಕ್ಷರಾದ ಶರಣಶ್ರೀ ಡಾ. ಈಶ್ವರ ಮಂಟೂರ ಅವರು. ೨೦೧೮ ರಲ್ಲಿ ಹುಕ್ಕೇರಿ ತಾಲೂಕು ಬಸವಬೆಳವಿ, ಚರಮೂರ್ತಿ ಚರಂತೇಶ್ವರ ವಿರಕ್ತಮಠದ ಶ್ರೀ ಶರಣಬಸವದೇವರು.

೨೦೧೯ರಲ್ಲಿ ಬೆಂಗಳೂರು ಉತ್ತರ, ಲಕ್ಷ್ಮೀಪುರ, ಬಸವಯೋಗಾಶ್ರಮದ ಪೂಜ್ಯ ಶ್ರೀ ಅಲ್ಲಮಪ್ರಭುಸ್ವಾಮಿಜಿ ಅವರು. ೨೦೨೦ ಹಾಗೂ ೨೦೨೧ ಕೊವಿಡ್ ಹಾವಳಿಯಲ್ಲಿ ಪ್ರವಚನ ಇರಲಿಲ್ಲ. ೨೦೨೨ ರಲ್ಲಿ ಹುಬ್ಬಳ್ಳಿ ಶ್ರೀ ಗುರು ಬಸವಮಂಟಪದ ಶ್ರೀ ಶಶಿಧರ ಕರವೀರಶೆಟ್ಟರ, ಶಿರಗುಪ್ಪಾದ ಪೂಜ್ಯ ಶ್ರೀ ವೆಂಕಟಾಪುರ ಶರಣರು, ಶಿವಮೊಗ್ಗ ಬಸವ ಕೇಂದ್ರ, ಚಿಕ್ಕಮಗಳೂರು ಬಸವಮಂದಿರದ ಪರಮ ಡಾ. ಬಸವಮರುಳಸಿದ್ಧ ಮಹಾಸ್ವಾಮಿಜಿಯವರು, ೨೦೨೩ ಹಾಗೂ ೨೦೨೪ ರಲ್ಲಿ ಶ್ರೀ ಗುರು ಬಸವಮಂಟಪದ ಅನುಭಾವಿಗಳು, ಶ್ರೇಷ್ಠ ವಾಗ್ಮಿಗಳು, ಬಸವ ತತ್ವ ನಿಷ್ಠರು, ಪ್ರಸಾರಕರು, ಉತ್ತಮ ಪ್ರವಚನಕಾರರಾದ ಶ್ರೀ ಶಶಿಧರ ಕರವೀರಶೆಟ್ಟರ ಅವರು, ೨೦೨೫ರಲ್ಲಿ ಬೆಳಗಾವಿ ಜಿಲ್ಲೆಯ ಯಮಕನಮರಡಿಯ ಹುಣಸಿಕೊಳ್ಳಮಠ, ಶ್ರೀ ಜಗದ್ದುರು ಶೂನ್ಯಸಂಪಾದನ ಪೀಠದ ಪರಮ ಪೂಜ್ಯ ಸಿದ್ಧಬಸವ ದೇವರು ಪ್ರವಚನದಲ್ಲಿ ಅನುಭಾವ ನೀಡಿದರು.

ಈ ವಷ೯ ಬೀದರ್ ಬಸವಗಿರಿ ಲಿಂಗಾಯತ ಮಹಾಮಠದ ಶ್ರೀ ಪ್ರಭುದೇವ ಮಹಾಸ್ವಾಮಿಗಳು ಅವರ ಅಮೃತವಾಣಿಯನ್ನು ಕೇಳುವ ಸದಾವಕಾಶ ಬಂದಿದೆ. ಈ ಪ್ರವಚನದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾಯ೯ದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ವಿನಂತಿಸಿದ್ದಾರೆ.

ಶ್ರೀ ಪ್ರಭುದೇವ್ ಮಹಾಸ್ವಾಮಿಗಳು, ಪೀಠಾಧಿಪತಿಗಳು ಲಿಂಗಾಯತ ಮಹಾಮಠ ಬಸವಗಿರಿ ಬೀದರ : ಬೀದರ್ ಜಿಲ್ಲೆಯ ಪುಟ್ಟಹಳ್ಳಿ ರಾಜಗೀರಾದಲ್ಲಿ ಜನಿಸಿದ ಪ್ರಭು ವಿದ್ಯಾರ್ಥಿ ದೆಸೆಯಲ್ಲಿ ಖ್ಯಾತ ಪ್ರವಚನಕಾರರಾದ ಪೂಜ್ಯ ಮಾತೆ ಡಾ ಅನ್ನಪೂರ್ಣ ಅಕ್ಕನವರ ಕೃಪೆಗೆ ಪಾತ್ರರಾಗಿದ್ದರು. ಅಕ್ಕನವರ್ ಪ್ರವಚನಗಳಿಂದ ಪ್ರಭಾವಿತರಾದ ಪ್ರಭು ಅವರು ವೈರಾಗ್ಯದತ್ತ ವಾಲಿದರು. ಡಾ ಅನ್ನಪೂರ್ಣ ಅಕ್ಕನವರ್ ಕರಕಮಲ ಸಂಜಾತರಾಗಿ ಶ್ರೀ ಪ್ರಭು ದೇವರು ಆದರು. ಗುರು ಮುಟ್ಟಿ ಗುರು ಆಗಿ ಬಸವಾದಿ ಶರಣರ ತತ್ವ ಪ್ರಸಾರಕ್ಕೆ ಪ್ರಭುದೇವರು ತಮ್ಮನ್ನು ತಾವು ಸಮರ್ಪಿಸಿಕೊಂಡರು. ಡಾ ಅನ್ನಪೂರ್ಣ ಅಕ್ಕ ಅವರಂತೆ ಪ್ರವಚನಗಳಲ್ಲಿ ಸತತ ಅಧ್ಯಯನಶೀಲರಾಗಿ ಶ್ರದ್ದಾ, ಭಕ್ತಿ ಯಿಂದ ತೊಡಗಿಸಿಕೊಂಡರು. ಡಾ ಅನ್ನಪೂರ್ಣ ಅಕ್ಕ ಅವರು ಶ್ರೀ ಪ್ರಭುದೇವರು ಪ್ರವಚನಗಳಲ್ಲಿಯ ಅನುಭವ, ಅನುಭಾವ ನೀಡುವುದನ್ನು ಕಂಡು, ನೋಡಿ, ಭಾಗವಹಿಸಿ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

ಬೀದರ್ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಗ್ರಾಮ, ಶಹರ, ಪಟ್ಟಣಗಳಲ್ಲಿ ಬಸವ ತತ್ವ ಪ್ರಚಾರ, ಪ್ರಸಾರ ಕಾಯಕದಲ್ಲಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಆಧ್ಯಾತ್ಮ ಗುರು ಡಾ. ಅಕ್ಕ ಅನ್ನಪೂರ್ಣ ತಾಯಿಯವರ ಗುರುಸೇವೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪೂಜ್ಯ ಶ್ರೀ ಪ್ರಭುದೇವರು ಮಾಡಿದ್ದಾರೆ. ಬಸವಾದಿ ಶರಣರ ಮಣಿಹಕ್ಕೆ ಮೀಸಲಾಗಿರುವ ಡಾ ಅಕ್ಕ ಅನ್ನಪೂರ್ಣ ತಾಯಿಯವರು ಸ್ಥಾಪಿಸಿದ ಬೀದರನ ಲಿಂಗಾಯತ ಮಹಾಮಠದ ದ್ವಿತೀಯ ಪೀಠಾಧಿಪತಿ ಆದ ಶ್ರೀ ಪ್ರಭುದೇವರು, ಶ್ರೀ ಪ್ರಭುದೇವ ಮಹಾಸ್ವಾಮಿಗಳಾದರು. ಶ್ರೀ ಪ್ರಭುದೇವ ಮಹಾಸ್ವಾಮಿಗಳು ಸರಳ ಜೀವನ್ ಜೊತೆಗೆ ಶಿಸ್ತು, ವಿನಯಶೀಲತೆ ರೂಡಿಸಿಕೊಂಡು ಶರಣರ ಪಥದಲ್ಲಿ ಡಾ. ಅಕ್ಕ ಅನ್ನಪೂರ್ಣ ತಾಯಿಯವರ ಕನಸನ್ನು ನನಸು ಮಾಡಲು ೭೭೦ ಗ್ರಾಮಗಳಲ್ಲಿ ಶರಣರ ತತ್ವಗಳ ಪ್ರವಚನ ನೀಡುವ ಸಂಕಲ್ಪ್ ಮಾಡಿದ್ದಾರೆ. ಶ್ರೀ ಪ್ರಭುದೇವ ಮಹಾಸ್ವಾಮಿಗಳು ಅತ್ಯಂತ ಕ್ರಿಯಾಶೀಲರಾಗಿದ್ದು ಶರಣರ ತತ್ವಗಳನ್ನು ಪ್ರವಚನಗಳ ಮೂಲಕ ಪ್ರಸಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಲ್ಪಾವಧಿಯಲ್ಲಿಯೇ ಬೀದರ, ಹೈದರಾಬಾದ, ಜಹಿರಾಬಾದ, ಹನುಮಸಾಗರ, ಕೊಪ್ಪಳ, ಅಥಣಿ ಸೇರಿದಂತೆ ಮುಂತಾದ ಕಡೆಗಳಲ್ಲಿ ಬಸವಾದಿ ಶರಣರ ತತ್ವಗಳ ವಚನಗಳ ಮೌಲ್ಯಗಳ ಕುರಿತು ಪ್ರವಚನ ನೀಡುತ್ತಾ ಸಾಗಿದ್ದಾರೆ.

ಬಸವಕೇಂದ್ರವು ಶರಣರ ವಚನಗಳ ಬೆಳಕಿನಲ್ಲಿ ಜನರಲ್ಲಿ ಕಾಯಕನಿಷ್ಠೆ, ದಾಸೋಹಂಭಾವ, ಭಾವೈಕ್ಯತೆ ಬೆಳೆಸುವುದು, ಮೂಢನಂಬಿಕೆ, ಕಂದಾಚಾರ, ಅಂಧಶ್ರದ್ಧೆಗಳನ್ನು ಹೊಡೆದೋಡಿಸುವುದು, ನಿಶ್ಚಯಕಾರಣ, ಕಲ್ಯಾಣ ಮಹೋತ್ಸವ, ಸೀಮಂತಕಾರಣ, ನಾಮಕರಣ, ಹುಟ್ಟುಹಬ್ಬಗಳನ್ನು ಸರಳವಾಗಿ, ಸುಂದರವಾಗಿ ನೆರವೇರಿಸುವದು ಈ ಹಲವು ಹತ್ತು ಉದ್ದೇಶಗಳನ್ನು ಹೊಂದಿದೆ.

ಬಸವ ಕೇಂದ್ರ ಅಧ್ಯಕ್ಷರಾಗಿರುವವರು ನಿವೃತ್ತ ಪ್ರಾಧ್ಯಾಪಕರು, ಬಸವ ತತ್ವ ನಿಷ್ಠರು, ಪ್ರಸಾರಕರು, ವಚನ ಶ್ರಾವಣ ಕಾರ್ಯಕ್ರಮದ ಸಂಘಟಕರು, ಅತ್ಯಂತ ಕ್ರೀಯಾಶೀಲ ವ್ಯಕ್ತಿತ್ವ ಹೊಂದಿರುವ ಪ್ರೊ. ಜಿ.ಬಿ. ಹಳ್ಯಾಳ ಅವರ ನೇತೃತ್ವದಲ್ಲಿ ಬಸವ ಕೇಂದ್ರದ ತಂಡವು ಹಲವಾರು ಉತ್ತಮವಾದ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಜನರಲ್ಲಿ ಧರ್ಮ ಜಾಗೃತಿಯನ್ನು ಮೂಡಿಸುತ್ತಿದೆ.

ಬಸವ ಭಾಷೆ ಪ್ರವಚನದ ಉದ್ಘಾಟನಾ ಸಮಾರಂಭ ದಿನಾಂಕ ೧೫-೧೧-೨೦೨೬ ರಂದು ಸಂಜೆ ೬ ಗಂಟೆಗೆ ಗೋಕುಲ ರಸ್ತೆಯ ಬಸವೇಶ್ವರ ನಗರದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಲಿದೆ. ಹುಬ್ಬಳ್ಳಿ – ಬೈಲಹೊಂಗಲ ರುದ್ರಾಕ್ಷಿಮಠದ ಪರಮ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸುವರು. ಶ್ರೀ ಗುರು ಬಸವ ಮಂಟಪ ಸಂಚಾಲಕರು, ಬಸವ ತತ್ವ ಪ್ರಸಾರಕರು, ಚಿಂತಕ ಶ್ರೀ ಶಶಿಧರ ಕರವೀರಶೆಟ್ಟರ್ ಅನುಭವ ನೀಡುವರು. ಶ್ರೀ ಪ್ರಭುದೇವ್ ಮಹಾಸ್ವಾಮಿಗಳು, ಪೀಠಾಧಿಪತಿಗಳು ಲಿಂಗಾಯತ ಮಹಾಮಠ ಬಸವಗಿರಿ ಬೀದರ, ಬಸವಕೇಂದ್ರದ ಅಧ್ಯಕ್ಷ ಪ್ರೊ ಜಿ.ಬಿ. ಹಳ್ಳಾಳ, ಕಾರ್ಯಾಧ್ಯಕ್ಷ ಪ್ರೊ ಎಸ್.ವಿ. ಪಟ್ಟಣಶೆಟ್ಟಿ, ಕಾರ್ಯದರ್ಶಿ ಕೆ.ಎಸ್. ಇನಾಮತಿ ಉಪಸ್ಥಿತರಿರುವರು.

ಈ ಪ್ರವಚನದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾಯ೯ದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ವಿನಂತಿಸಿದ್ದಾರೆ. ಬಸವಕೇಂದ್ರದ ಹೆಚ್ಚಿನ ಮಾಹಿತಿಯನ್ನು ಬಸವಕೇಂದ್ರದ ಅಧ್ಯಕ್ಷ ಪ್ರೊ ಜಿ.ಬಿ.ಹಳ್ಳಾಳ, ಮೊ: ೯೪೪೮೧೧೫೫೯೪ ಪಡೆಯಬಹುದಾಗಿದೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *