ಕಲಬುರ್ಗಿಯ ಡಾ. ದಾಕ್ಷಾಯಣಿ ಅಪ್ಪ ಮಾತೆಗೆ ಕಾಶಿ ಪೀಠದ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರ

ಹಂಚಿಕೊಳ್ಳಿ

ವಾರಾಣಸಿ(ಉ.ಪ್ರ.)
ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಇಲ್ಲಿಯ ಕಾಶಿ ಜ್ಞಾನ ಪೀಠದಿಂದ ಸಾಧಕ ಮಹಿಳೆಯೋರ್ವರಿಗೆ ಪ್ರತಿವರ್ಷ ಕೊಡಮಾಡುವ ಮಾಲತಿ ಮಹಾರುದ್ರಪ್ಪ ಖೇಣಿ ‘ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರ’ವನ್ನು ಪ್ರಕಟಿಸಲಾಗಿದ್ದು, 2026ನೇ ಸಾಲಿನ ಪುರಸ್ಕಾರಕ್ಕೆ ಕಲಬುರ್ಗಿ ಶರಣಬಸವೇಶ್ವರ ಸಂಸ್ಥಾನಮಠದ ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಅವರು ಆಯ್ಕೆಯಾಗಿದ್ದಾರೆ. ಈ ಪುರಸ್ಕಾರವು ಒಂದು ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಕಾಶಿ ಪೀಠದ ಶಾಖಾಮಠವಾದ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಶಾಕಾಪುರ ತಪೋವನಮಠದಲ್ಲಿ ಇದೇ ನವೆಂಬರ್ 29 ರಂದು ನಡೆಯಲಿರುವ ಕಾಶಿ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ 37ನೆಯ ಪೀಠಾರೋಹಣ ವರ್ಧಂತಿ ಮಹೋತ್ಸವದಲ್ಲಿ ಈ ಪುರಸ್ಕಾರ ಪ್ರದಾನ ನಡೆಯಲಿದೆ.

ಮಹಾರಾಷ್ಟ್ರದ ಪ್ರಸಿದ್ಧ ಉದ್ಯಮಿ ಡಾ. ಬಾಬಾ ಕಲ್ಯಾಣಿ ಅವರ ಪತ್ನಿ ಸುನೀತ ಬಾಬಾ ಕಲ್ಯಾಣಿ ತಮ್ಮ ತಾಯಿ ಮಾಲತಿ ಖೇಣಿ ಸ್ಮರಣಾರ್ಥ ಕಾಶಿ ಜ್ಞಾನ ಪೀಠದಲ್ಲಿ ಈ ಪುರಸ್ಕಾರ ಸ್ಥಾಪಿಸಿದ್ದಾರೆ. ಸಮಾಜ ಸೇವೆ, ಶೈಕ್ಷಣಿಕ ಸಾಧನೆ ಸೇರಿ ವಿಶೇಷ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಪರಿಗಣಿಸಿ ಅಪರೂಪದ ಸಾಧಕಿಯರನ್ನು ಗುರುತಿಸಿ ಪ್ರತೀ ವರ್ಷ ಈ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ.

ಪ್ರಸ್ತುತ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ದಾಕ್ಷಾಯಣಿ ಅಪ್ಪ ಅವರ ಅನುಪಮ ಸೇವೆಯನ್ನು ಪರಿಗಣಿಸಿ ಮಾತೆಯವರನ್ನು 2026ರ ಮಾತೃಶಕ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಪೀಠಾರೋಹಣ ವರ್ಧಂತಿ:
ಕಾಶಿ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ 37ನೆಯ ಪೀಠಾರೋಹಣ ವರ್ಧಂತಿ ಮಹೋತ್ಸವದ ಅಂಗವಾಗಿ ನ. 29 ರಂದು ಬೆಳಗ್ಗೆ 9ಕ್ಕೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ನಂತರ ಪೀಠಾರೋಹಣ ವರ್ಧಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಶ್ರೀಜಗದ್ಗುರು ವಿಶ್ವಾರಾಧ್ಯ ಮಂದಿರದ ಶಿಲಾನ್ಯಾಸ ನಡೆಯಲಿದೆ ಎಂದು ಶಾಕಾಪುರ ತಪೋವನಮಠದ ಡಾ.ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *