ಕ್ರೈಸ್ಟ್ಚರ್ಚ್
ಕೆಳ ಕ್ರಮಾಂಕದ ಬ್ಯಾಟರ್ಗಳು ಉತ್ತಮ ಕಾಣಿಕೆ ಸಲ್ಲಿಸುವುದರೊಂದಿಗೆ ಆತಿಥೇಯ ನ್ಯೂಜಿಲೆಂಡ್(ಎ) ತಂಡ ಪ್ರವಾಸಿ ಭಾರತ(ಎ) ತಂಡದ ಎದುರು ಇಲ್ಲಿ ನಡೆದಿರುವ ೨ನೇ ಅನಧಿಕೃತ ಕ್ರಿಕೆಟ್ ಟೆಸ್ಟ್’ ಪಂದ್ಯದ ಪ್ರಥಮ ಇನ್ನಿಂಗ್ಸ್ನಲ್ಲಿ ಮಹತ್ವದ ಲೀಡ್ ಬಾಚಿಕೊಂಡಿತು.
ಮಂಗಳವಾರ ಮುಂಜಾನೆ ತನ್ನ ಮೊದಲ ಸರದಿಯ ಆಟವನ್ನು ಮುಂದುವರಿಸಿ ೪೨೪ಕ್ಕೆ ಆಲೌಟಾದ ಕೀವೀಸ್ ತಂಡ ೭೮ ರನ್ಗಳ ಮುನ್ನಡೆ ಸಾಧಿಸಿತು. ಆ ನಂತರ ಯಶಸ್ವಿ ಜೈಸ್ವಾಲ್(೨೦ ಬ್ಯಾಟಿಂಗ್, ೩೮ ಎಸೆತ, ೩ ಬೌಂಡರಿ) ಹಾಗೂ ಸಾಯಿ ಸುದರ್ಶನ್(ಬ್ಯಾಟಿಂಗ್ ೧೧, ೨೮ ಎಸೆತ, ೨ ಬೌಂಡರಿ) ಅಜೇಯರಾಗುಳಿಯುವುದರೊಂದಿಗೆ ಭಾರತ ಮೂರನೇ ದಿನದಾಟದ ಕೊನೆಯಲ್ಲಿ ತನ್ನ ಎರಡನೇ ಸರದಿಯಲ್ಲಿ ವಿಕೆಟ್ ಕಳೆದುಕೊಳ್ಳದೇ ೩೨ ರನ್ ಗಳಿಸಿದ್ದು, ಮಂಗಳವಾರ ಕೊನೆಯ ದಿನದ ಆಟ ಮಾತ್ರ ಬಾಕಿಯಿರುವಂತೆ ೪೬ ರನ್ಗಳಿಂದ ಹಿಂದಿತ್ತು.
ಇದಕ್ಕೂ ಮೊದಲು ೩ ವಿಕೆಟ್ಗಳಿಗೆ ೨೧೮ರ ಸ್ಕೋರಿನಿಂದ ತನ್ನ ಮೊದಲ ಸರದಿಯ ಬ್ಯಾಟಿಂಗ್ ಮುಂದುವರಿಸಿದ ಕೀವೀಸ್ ತಂಡಕ್ಕೆ ಭಾನುವಾರ ಔಟಾಗದೇ ಉಳಿದಿದ್ದ ಮ್ಯಾಟ್ ಬಾಯ್ಲ್(೧೧೦, ೧೫೨ ಎಸೆತ, ೧೪ ಬೌಂಡರಿ, ೧ ಸಿಕ್ಸರ್) ಹಾಗೂ ಡೀನ್ ಫಾಕ್ಸ್ಕ್ರಾಫ್ಟ್(೯೩, ೨೨೬ ಎಸೆತ, ೯ ಬೌಂಡರಿ) ಅವರ ವಿಕೆಟ್ಗಳೆರಡನ್ನೂ ಕಿತ್ತ ಮೊಹಮ್ಮದ್ ಸಿರಾಜ್ ಆಘಾತ ನೀಡಿದರು. ಆದರೆ ಕೆಳ ಕ್ರಮಾಂಕದಲ್ಲಿ ಕ್ರಿಸ್ಟಿಯನ್ ಕ್ಲರ್ಕ್(೪೧), ಫ್ರೇಸರ್ ಶೀಟ್(೪೦), ಜೆರಾಡ್ ಮ್ಯಾಕೆ(೩೩), ಜೇಡನ್ ಲೆನಾಕ್ಸ್(ಔಟಾಗದೇ ೩೨) ಹಾಗೂ ವಿಕೆಟ್ ಕೀಪರ್ ಮಿಚ್ ಹೇ(೩೧) ಭಾರತದ ಬೌಲರ್ಗಳನ್ನು ಆತ್ಮ ವಿಶ್ವಾಸದಿಂದ ಎದುರಿಸಿ ಉಪಯುಕ್ತ ರನ್ ಗಳಿಸಿ ತಂಡಕ್ಕೆ ಮಹತ್ವದ ಮುನ್ನಡೆ ತಂದಿಡುವಲ್ಲಿ ಯಶ ಕಂಡರು.
ಫೈಫರ್’ ಸಾಧನೆಗೈದ ವೇಗಿ ಮುಕೇಶ್ ಕುಮಾರ್(೫/೮೭) ಪ್ರವಾಸಿ ತಂಡದ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿದರೆ, ಮೊಹಮ್ಮದ್ ಸಿರಾಜ್(೪/೧೧೮) ಅವರಿಗೆ ಇನ್ನೊಂದು ತುದಿಯಿಂದ ಸಮರ್ಥ ಬೆಂಬಲ ನೀಡಿದರು.
ಸಂಕ್ಷಿಪ್ತ ಸ್ಕೋರುಗಳು: ಭಾರತ(ಎ): ೧೦೨.೪ ಓವರ್ಗಳಲ್ಲಿ ೩೪೬ ಹಾಗೂ ೧೧ ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ೩೨; ನ್ಯೂಜಿಲೆಂಡ್(ಎ): ೧೩೨.೫ ಓವರ್ಗಳಲ್ಲಿ ೪೨೪.

