ಕ್ರೈಸ್ಟ್ಚರ್ಚ್
ಪ್ರವಾಸಿ ಭಾರತ(ಎ) ತಂಡದ ಎದುರು ಇಲ್ಲಿ ನಡೆದಿರುವ ೨ನೇ ಅನಧಿಕೃತ `ಟೆಸ್ಟ್’ನ ಎರಡನೇ ದಿನ ನ್ಯೂಜಿಲೆಂಡ್(ಎ) ತಂಡ ಆರಂಭದಲ್ಲಿ ತೀವ್ರ ಕುಸಿತ ಕಂಡರೂ, ಮ್ಯಾಟ್ ಬಾಯ್ಲ್ ಹಾಗೂ ಡೀನ್ ಫಾಕ್ಸ್ ಕ್ರಾಫ್ಟ್ ನಡುವಿನ ಮುರಿಯದ ನಾಲ್ಕನೇ ವಿಕೆಟ್ ದ್ವಿಶತಕದ ಜೊತೆಯಾಟದ ನೆರವಿನಿಂದ ಎರಡು ನೂರರ ಗಡಿ ದಾಟಿ ಉತ್ತಮ ಸ್ಥಿತಿಯಲ್ಲಿತ್ತು.
ನಾಯಕ ಧ್ರುವ್ ಜುರೇಲ್ ಅವರ ಭರ್ಜರಿ ಶತಕ ಹಾಗೂ ಆಕಾಶ್ ದೀಪ್ ಅವರ ಬಿರುಸಿನ ಅರ್ಧ ಶತಕದ ನೆರವಿನಿಂದ ಭಾರತ ಭಾನುವಾರ ಮುಂಜಾನೆ ತನ್ನ ಮೊದಲ ಸರದಿಯಲ್ಲಿ ೩೪೬ ರನ್ ಗಳಿಸಿ ಆಲೌಟಾದ ನಂತರ ಬ್ಯಾಟ್ ಮಾಡಿದ ನ್ಯೂಜಿಲೆಂಡ್(ಎ) ಎರಡನೇ ದಿನದಾಟದ ಕೊನೆಯಲ್ಲಿ ೩ ವಿಕೆಟ್ಗಳಿಗೆ ೨೧೮ರ ಸ್ಕೋರು ಸಂಪಾದಿಸಿದ್ದು ಕೇವಲ ೧೨೮ ರನ್ಗಳ ಹಿನ್ನಡೆಯಲ್ಲಿದೆ.
ಧ್ರುವ್ ಜುರೇಲ್ ಶತಕ;
ಭಾನುವಾರ ಮುಂಜಾನೆ ೭ ವಿಕೆಟ್ಗಳಿಗೆ ೨೯೧ರ ಮೊತ್ತದಿಂದ ತನ್ನ ಪ್ರಥಮ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ ಭಾರತ(ಎ) ಆ ಮೊತ್ತಕ್ಕೆ ಮತ್ತೆ ೫೫ ರನ್ ಸೇರಿಸಿತು. ಮೊದಲ ದಿನದಾಟದ ಕೊನೆಗೆ ೯೯ ರನ್ ಗಳಿಸಿ ಆಡುತ್ತಿದ್ದ ನಾಯಕ ಧ್ರುವ್ ಜುರೇಲ್(೧೦೫, ೧೭೧ ಎಸೆತ, ೧೧ ಬೌಂಡರಿ, ೩ ಸಿಕ್ಸರ್) ಸೊಗಸಾದ ಶತಕ ಪೂರ್ತಿಗೊಳಿಸಿದರು. ಆಕಾಶದೀಪ್(೬೮, ೧೧೬ ಎಸೆತ, ೧೦ ಬೌಂಡರಿ, ೨ ಸಿಕ್ಸರ್) ಆರ್ಧ ಶತಕ ಬಾರಿಸಿ ತಂಡದ ಮೊತ್ತ ಉಬ್ಬಿಸಲು ಕಾರಣರಾದರು. ಬಲಗೈ ವೇಗಿ ಫ್ರೇಸರ್ ಶೀಟ್(೪/೬೩) ನ್ಯೂಜಿಲೆಂಡ್(ಎ) ಪರ ಅತ್ಯಧಿಕ ವಿಕೆಟ್ ಎತ್ತಿದ ಬೌಲರ್.
ಭೋಜನ ವಿರಾಮಕ್ಕೆ ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್(ಎ) ತಂಡಕ್ಕೆ ಆರಂಭದಲ್ಲೇ ಒಂದರ ಹಿಂದೊAದರAತೆ ಮೂರು ಆಘಾತಗಳು ಕಾದಿದ್ದವು. ಮೊಹಮ್ಮದ್ ಸಿರಾಜ್(೧/೪೯) ಹಾಗೂ ಮುಕೇಶ್ ಕುಮಾರ(೨/೪೪) ವೇಗದೆದುರು ಪರದಾಡಿದ ಎದುರಾಳಿ ನಾಯಕ ರೈಸ್ ಮರಿಯು(೪), ಕರ್ಟಿಸ್ ಹೀಫಿ(೪) ಹಾಗೂ ಟಿಮ್ ರಾಬಿನ್ಸನ್(೩) ಮೊತ್ತ ೧೩ ತಲುಪುವಷ್ಟರಲ್ಲೇ ಪೆವಿಲಿಯನ್ನಿಗೆ ವಾಪಸಾಗಿ ತಂಡವನ್ನು ತೀರ ಸಂಕಷ್ಟಕ್ಕೆ ತಳ್ಳಿದ್ದರು.
ಆದರೆ ಆಗ ಜೊತೆಗೂಡಿದ ಮ್ಯಾಟ್ ಬಾಯ್ಲ್ ಹಾಗೂ ಡೀನ್ ಫಾಕ್ಸ್ಕ್ರಾಫ್ಟ್ ಮುರಿಯದ ನಾಲ್ಕನೇ ವಿಕೆಟ್ಗೆ ೩೨೪ ಎಸೆತಗಳಲ್ಲಿ ೨೦೫ ರನ್ ಸೇರಿಸಿ ತಂಡಕ್ಕೆ ಅದ್ಭುತ ಚೇತರಿಕೆ ನೀಡಿದರು. ಎರಡನೇ ದಿನದಾಟದ ಕೊನೆಯಲ್ಲಿ ಬಾಯ್ಲ್ ೧೪೮ ಎಸೆತಗಳಲ್ಲಿ ೧೪ ಬೌಂಡರಿ ಹಾಗೂ ೧ ಸಿಕ್ಸರ್ ಇದ್ದ ೧೦೭ ರನ್ ಬಾರಿಸಿ ಅಜೇಯರಾಗುಳಿದಿದ್ದರೆ, ಅವರಿಗೆ ಸಾಥ್ ನೀಡಿರುವ ಫಾಕ್ಸ್ಕ್ರಾಫ್ಟ್ ೧೮೦ ಎಸೆತಗಳಲ್ಲಿ ೯ ಬೌಂಡರಿಗಳಿದ್ದ ೮೦ ರನ್ಗಳಿಸಿ ಆಡುತ್ತಿದ್ದಾರೆ.
ಸಂಕ್ಷಿಪ್ತ ಸ್ಕೋರುಗಳು: ಭಾರತ(ಎ): ೧೦೨.೪ ಓವರ್ಗಳಲ್ಲಿ ೩೪೬; ನ್ಯೂಜಿಲೆಂಡ್(ಎ): ೬೨ ಓವರ್ಗಳಲ್ಲಿ ೩ ವಿಕೆಟ್ಗಳಿಗೆ ೨೧೮.

