ಕರ್ನಾಟಕದ ವನಿತೆಯರಿಗೆ ಸತತ ೭ನೇ ಗೆಲುವು: ಮಹಿಳೆಯರ ಟಿ೨೦ ಕ್ರಿಕೆಟ್ ಟೂರ್ನಿ

ಹಂಚಿಕೊಳ್ಳಿ

ಸೂರತ್
ಪ್ರಾರಂಭಿಕ ಬ್ಯಾಟರ್ ವೃಂದಾ ದಿನೇಶ ಹಾಗೂ ಇತ್ತೀಚೆಗಷ್ಟೇ ಭಾರತದ ಸೀನಿಯರ್ ತಂಡಕ್ಕೆ ಪದಾರ್ಪಣ ಮಾಡಿದ ನಿಕಿ ಪ್ರಸಾದ ಅವರುಗಳ ಸ್ಪೋಟಕ ಅರ್ಧ ಶತಕಗಳ ನೆರವಿನಿಂದ ಕರ್ನಾಟಕ ಇಲ್ಲಿ ನಡೆದಿರುವ ಬಿಸಿಸಿಐ ಆಶ್ರಯದ ಮಹಿಳೆಯರ ಟಿ೨೦ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಚಂಡೀಗಢ ತಂಡವನ್ನು ೭ ವಿಕೆಟ್‌ಗಳಿಂದ ಪರಾಭವಗೊಳಿಸಿತು.

ಇದರೊಂದಿಗೆ ಎ ಗುಂಪಿನಲ್ಲಿ ಆಡಿದ ಏಳಕ್ಕೆ ಏಳೂ ಲೀಗ್ ಪಂದ್ಯಗಳನ್ನು ಜಯಿಸಿದ ಕನ್ನಡತಿಯರು ಅಜೇಯ ದಾಖಲೆಯೊಂದಿಗೆ ನಾಕೌಟ್ ಪ್ರವೇಶಿಸಿದರು.

ಶುಕ್ರವಾರ ಇಲ್ಲಿಯ ಸಿ.ಕೆ. ಪಿಥವಾಲಾ ಮೈದಾನದಲ್ಲಿ ನಡೆದ ಕೊನೆಯ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚಂಡೀಗಢ ೬ ವಿಕೆಟ್‌ಗಳಿಗೆ ೧೪೦ರ ಮೊತ್ತ ಸಂಪಾದಿಸಿದರೆ, ಕರ್ನಾಟಕ ೧೬.೨ ಓವರ್‌ಗಳಲ್ಲಿ ಕೇವಲ ಮೂರೇ ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು.

ಕರ್ನಾಟಕ ಸರದಿಯ ಆರಂಭ ಸಹ ಆಘಾತಕಾರಿಯಾಗಿತ್ತು. ಸ್ಕೋರು ೭ ತಲುಪುವಷ್ಟರಲ್ಲಿ ಅದರ ಇಬ್ಬರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಆದರೆ ಆಗ ವೃಂದಾ ದಿನೇಶ(ಔಟಾಗದೇ ೬೦, ೩೯ ಎಸೆತ, ೫ ಬೌಂಡರಿ, ೩ ಸಿಕ್ಸರ್) ಅವರ ಜೊತೆಗೂಡಿದ ನಿಕಿ ಪ್ರಸಾದ(೫೨, ೩೩ ಎಸೆತ, ೯ ಬೌಂಡರಿ, ೧ ಸಿಕ್ಸರ್) ಮೂರನೇ ವಿಕೆಟ್‌ಗೆ ೬೧ ಎಸೆತಗಳಲ್ಲಿ ಅತ್ಯುಪಯುಕ್ತ ೯೭ ರನ್ ಸೇರಿಸಿ ತಂಡದ ಗೆಲುವಿಗೆ ಕಾರಣರಾದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಟಟ್ಟ ಚಂಡೀಗಢದ ಬ್ಯಾಟರ್‌ಗಳು ಬಿ.ಜಿ. ತೇಜಸ್ವಿನಿ(೨/೧೭), ಅನನ್ಯಾ ಹೆಗಡೆ(೨/೨೦), ನಿಕಿ ಪ್ರಸಾದ(೧/೨೩) ಹಾಗೂ ದೀಕ್ಷಾ ಹೊನುಶ್ರೀ(೧/೨೪) ಪರಿಣಾಮಕಾರಿ ದಾಳಿಯೆದರು ಪರದಾಡಿ ೬ ವಿಕೆಟ್‌ಗಳಿಗೆ ೧೪೦ರ ಮೊತ್ತ ತಲುಪುವಲ್ಲಿ ಮಾತ್ರ ಯಶ ಕಂಡರು. ದಿಟ್ಟ ಆಟವಾಡಿದ ಭಾರತ ತಂಡದ ಮಾಜಿ ಆಟಗಾರ್ತಿ ತಾನಿಯಾ ಭಾಟಿಯಾ(೬೯, ೫೩ ಎಸೆತ, ೧೦ ಬೌಂಡರಿ, ೧ ಸಿಕ್ಸರ್) ಅರ್ಧ ಶತಕ ದಾಖಲಿಸಿದರು. ಕಾಶ್ವೀ ಗೌತಮ್(ಔಟಾಗದೆ ೨೧) ಮತ್ತು ಪಲಕ್ ರಾಣಾ(೧೭) ಪ್ರತಿರೋಧವೊಡ್ಡಿದ ಇನ್ನಿಬ್ಬರು ಬ್ಯಾಟರ್‌ಗಳು.

ಸಂಕ್ಷಿಪ್ತ ಸ್ಕೋರುಗಳು: ಚಂಡೀಗಢ: ೨೦ ಓವರ್‌ಗಳಲ್ಲಿ ೬ ವಿಕೆಟ್‌ಗಳಿಗೆ ೧೪೦; ಕರ್ನಾಟಕ: ೧೬.೨ ಓವರ್‌ಗಳಲ್ಲಿ ೩ ವಿಕೆಟ್‌ಗಳಿಗೆ ೧೪೧. ಫಲಿತಾಂಶ: ಕರ್ನಾಟಕಕ್ಕೆ ೭ ವಿಕೆಟ್‌ಗಳ ಗೆಲುವು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *