ಕಡೂರು
ಧರ್ಮ ಮತ್ತು ವಾಣಿಜ್ಯ ಪರಸ್ಪರ ಪೂರಕ ಶಕ್ತಿಗಳು. ಧರ್ಮವು ಮನುಷ್ಯನ ಬದುಕಿಗೆ ಮೌಲ್ಯಗಳನ್ನು ನೀಡಿದರೆ ವಾಣಿಜ್ಯವು ಬದುಕಿಗೆ ಅಗತ್ಯವಾದ ಆರ್ಥಿಕ ಶಕ್ತಿ ಕೊಡುತ್ತದೆ. ಇವೆರಡೂ ಪರಸ್ಪರ ಪೂರಕವಾಗಿ ಸಾಗಿದಾಗ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶನಿವಾರ ಶ್ರೀ ವೀರಭದ್ರೇಶ್ವರ ಪ್ರಸನ್ನ ಕಂಫರ್ಟ ಉದ್ಘಾಟನೆಯ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.
ಧರ್ಮ ಮತ್ತು ವಾಣಿಜ್ಯ ಇವೆರಡೂ ಮಾನವ ಬದುಕಿನ ಎರಡು ಮಹತ್ವದ ಆಯಾಮಗಳು. ಧರ್ಮವು ಮನುಷ್ಯನಿಗೆ ಹೇಗೆ ಬದುಕಬೇಕು ಎಂಬುದನ್ನು ಕಲಿಸಿದರೆ ವಾಣಿಜ್ಯವು ಹೇಗೆ ಬದುಕನ್ನು ಕಟ್ಟಿಕೊಳ್ಳಬೇಕು ಎಂಬುದನ್ನು ಕಲಿಸುತ್ತದೆ. ಧರ್ಮವಿಲ್ಲದ ಸಂಪತ್ತು ಅಹಂಕಾರಕ್ಕೆ ಕಾರಣವಾಗಬಹುದು. ಆದರೆ ಧರ್ಮದ ಹಾದಿಯಲ್ಲಿ ಗಳಿಸಿದ ಸಂಪತ್ತು ಸಮಾಜದ ಕಲ್ಯಾಣಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸಂಪಾದನೆಗೆ ಪ್ರಾಮಾಣಿಕತೆ ವ್ಯವಹಾರಕ್ಕೆ ನೈತಿಕತೆ ಸಂಪತ್ತಿಗೆ ದಾಸೋಹದ ಮನೋಭಾವ ಇರಬೇಕಾಗುತ್ತದೆ ಎಂದರು.
ಲಾಭ ಗಳಿಸುವುದು ತಪ್ಪಲ್ಲ. ಆದರೆ ಅನ್ಯಾಯದ ಮೂಲಕ ಲಾಭ ಗಳಿಸುವುದು ಧರ್ಮ ಸಮ್ಮತವಲ್ಲ. ಸಂಪತ್ತು ಗಳಿಸುವುದರ ಜೊತೆಗೆ ಸಮಾಜದ ವಿಶ್ವಾಸವನ್ನು ಗಳಿಸುವುದೇ ನಿಜವಾದ ಯಶಸ್ಸು. ಶ್ರೀ ಜಗದ್ಗುರು ರೇಣುಕಾಚಾರ್ಯರು ಶ್ರಮದ ಕಾಯಕ ಬದುಕಿನಿಂದ ಜೀವನ ಉಜ್ವಲಗೊಳ್ಳುವುದೆಂದು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಹೆಚ್.ಎಂ. ಲೋಕೇಶ ಮತ್ತು ಕುಟುಂಬ ವರ್ಗದವರು ಕಾಯಕದಲ್ಲಿ ನಿಷ್ಠೆ ಹೊಂದಿ ಶ್ರದ್ಧೆಯಿಂದ ದುಡಿದು ಉನ್ನತಿ ಕಾಣುತ್ತಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದು ಹರುಷ ವ್ಯಕ್ತಪಡಿಸಿ ಶಾಲು ಸ್ಮರಣಿಕ ಫಲ ಪುಷ್ಪವಿತ್ತು ಶುಭ ಹಾರೈಸಿದರು.

ಸಮಾರಂಭ ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಭಾರತೀಯ ಪರಂಪರೆಯಲ್ಲಿ ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿರಲಿಲ್ಲ. ಅವು ಶಿಕ್ಷಣ ಕಲೆ ಸಂಸ್ಕೃತಿ ಅನ್ನ ದಾಸೋಹ ಮತ್ತು ಆರ್ಥಿಕ ಚಟುವಟಿಕೆಗಳ ಕೇಂದ್ರಗಳಾಗಿಯೂ ಕಾರ್ಯ ನಿರ್ವಹಿಸುತ್ತಿದ್ದವು. ಹೆಚ್.ಎಂ.ಲೋಕೇಶ ಪರಿವಾರದವರ ಶ್ರಮದ ಬೆವರಿನ ಫಲವಾಗಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿರುವುದು ಅವರ ಕ್ರಿಯಾಶೀಲ ಬದುಕಿಗೆ ಸಾಕ್ಷಿಯಾಗಿದೆ ಎಂದರು.
ಸಮಾರಂಭದ ನೇತೃತ್ವವನ್ನು ಹುಲಿಕೆರೆ ದೊಡ್ಡಮಠದ ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ಪ್ರಾಸ್ತಾವಿಕ ಉಪದೇಶಾಮೃತ ನೀಡಿದ ಬೀರೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಇಂದು ಉದ್ಘಾಟನೆಗೊಂಡ ಈ ವಾಣಿಜ್ಯ ಸಂಕೀರ್ಣವು ಕೇವಲ ವ್ಯಾಪಾರ ವಹಿವಾಟಿನ ಕಟ್ಟಡವಾಗದೇ ನೂರಾರು ಕುಟುಂಬಗಳ ಬದುಕಿಗೆ ಬೆಳಕಾಗಲಿ. ಉದ್ಯೋಗ ಸೃಷ್ಟಿಯ ಕೇಂದ್ರವಾಗಲಿ. ಆರ್ಥಿಕ ಸ್ವಾವಲಂಬನೆಯ ಶಕ್ತಿಯಾಗಲೆಂದ ಶ್ರೀಗಳು ಇಲ್ಲಿ ನಡೆಯುವ ಪ್ರತಿಯೊಂದು ವ್ಯಾಪಾರವು ನಂಬಿಕೆ ಮತ್ತು ವಿಶ್ವಾಸದ ನೆಲೆಯಲ್ಲಿ ನಡೆಯಲೆಂದು ಆಶಿಸಿದರು.
ಹುಣಸಘಟ್ಟ ಗುರುಮೂರ್ತಿ ಶಿವಾಚಾರ್ಯರು, ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯರು, ಚಿಕ್ಕಮಗಳೂರು ಚಂದ್ರಶೇಖರ ಶಿವಾಚಾರ್ಯರು, ಹಣ್ಣೆ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು, ನಂದಿಪುರದ ನಂದೀಶ್ವರ ಶಿವಾಚಾರ್ಯರು, ಬೇರುಗಂಡಿ ರೇಣುಕ ಮಹಾಂತ ಶಿವಾಚಾರ್ಯರು ಉಪಸ್ಥಿತರಿದ್ದರು. ಮಾಜಿ ಶಾಸಕ ಬೆಳ್ಳಿ ಪ್ರಕಾಶ ಸೇರಿದಂತೆ ಅನೇಕ ಗಣ್ಯರು ರಾಜಕೀಯ ಧುರೀಣರು ಪಾಲ್ಗೊಂಡಿದ್ದರು.
ಎಸ್.ವಿ.ಪಿ.ಕಂಫರ್ಟ್ಸ ಮಾಲೀಕರಾದ ಹೆಚ್.ಎಂ.ಲೋಕೇಶ ಸರ್ವರನ್ನು ಸ್ವಾಗತಿಸಿ ಮಾತನಾಡಿ, ದೇವಾಲಯದಿಂದ ಭಕ್ತಿ, ವಾಣಿಜ್ಯದಿಂದ ಬದುಕು ಮಾನವೀಯತೆಯಿಂದ ಸಮಾಜ ಬೆಳೆದು ಬರಬೇಕಾಗಿದೆ. ಈ ಮೂರರ ಸಮನ್ವಯವೇ ನಿಜವಾದ ಅಭಿವೃದ್ಧಿಯ ಸಂಕೇತ. ಧರ್ಮದ ಮಾರ್ಗದರ್ಶನದಲ್ಲಿ ವಾಣಿಜ್ಯ ಬೆಳೆದಾಗ ಸಂಪತ್ತು ಸಾರ್ಥಕಗೊಳ್ಳುತ್ತದೆ. ವಾಣಿಜ್ಯದ ಮೂಲಕ ಸಮಾಜದ ಬದುಕು ಸುಧಾರಿಸಿದಾಗ ಅಭಿವೃದ್ಧಿ ಅರ್ಥಪೂರ್ಣವಗುತ್ತದೆ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಗುರು ಹಿರಿಯರ ಸದಾಶಯ ಈ ಉನ್ನತಿಗೆ ಕಾರಣವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಶಿಕ್ಷಕ ಯತೀಶ ನಿರೂಪಿಸಿದರು.

