ರಣಜಿ: ಕರ್ನಾಟಕಕ್ಕೆ ಆಸ್ಸಾಂ ಎದುರು ಇನ್ನಿಂಗ್ಸ್ ಗೆಲುವು; ೧೬ ಪಾಯಿಂಟ್‌ಗಳೊಡನೆ ಗುಂಪಿನ ಅಗ್ರಸ್ಥಾನಕ್ಕೆ

ಹಂಚಿಕೊಳ್ಳಿ

ಗುವಾಹಟಿ
ಕಳೆದ ಸಲದ ರಣಜಿ ಟ್ರೋಫಿ ರನ್ನರ್-ಅಪ್ ಕರ್ನಾಟಕ ತಂಡ ಕೊನೆಗೂ ಗೆಲುವಿನ ಹಳಿಗೆ ಮರಳಿದೆ.

ಇಲ್ಲಿ ನಡೆದ ಆಸ್ಸಾಂ ಎದುರಿನ ನಾಲ್ಕು ದಿನಗಳ ಪಂದ್ಯದಲ್ಲಿ ಇನ್ನೂ ಒಂದು ದಿನಕ್ಕೂ ಅಧಿಕ ಸಮಯದ ಆಟ ಬಾಕಿಯಿರುವಂತೆಯೇ ಇನ್ನಿಂಗ್ಸ್ ಹಾಗೂ ೩೧೪ ರನ್‌ಗಳ ಬೃಹತ್ ಗೆಲುವು ಸಾಧಿಸಿದ ಶ್ರೇಯಸ್ ಗೋಪಾಲ್ ಪಡೆ, ಈ ಸಲದ ಎಲೀಟ್ `ಬಿ’ ಗುಂಪಿನ ಪಂದ್ಯಗಳಲ್ಲಿ ಸತತ ಎರಡನೇ ನಿಚ್ಚಳ ಗೆಲುವು ದಾಖಲಿಸಿ ಒಟ್ಟು ೧೬ ಪಾಯಿಂಟ್‌ಗಳೊಡನೆ ಗುಂಪಿನ ಅಗ್ರಸ್ಥಾನಕ್ಕೇರಿತು.

ಇಷ್ಟೇ ಸಂಖ್ಯೆಯ ಪಂದ್ಯಗಳಿAದ ೧೪ ಪಾಯಿಂಟ್ ಸಂಪಾದಿಸಿರುವ ಹೈದರಾಬಾದ ಎರಡನೇ ಸ್ಥಾನದಲ್ಲುಳಿದರೆ, ಸೌರಾಷ್ಟç(೧೩) ಹಾಗೂ ಪಂಜಾಬ(೧೨) ಅನುಕ್ರಮವಾಗಿ ಎರಡು ಹಾಗೂ ಮೂರನೇಯದಾದವು.

ಪಂದ್ಯದ ಮೂರನೇ ದಿನವಾದ ಬುಧವಾರದಂದು ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ತನ್ನ ಎರಡನೇ ಸರದಿಯಲ್ಲಿ ಒಟ್ಟು ೪೪೩ ರನ್ ಗಳಿಸಬೇಕಿದ್ದ ಆಸ್ಸಾಂ ಮತ್ತೊಮ್ಮೆ ಕುಸಿದು ೪೦.೨ ಓವರ್‌ಗಳಲ್ಲಿ ಕೇವಲ ೧೨೮ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡಿತು.

ಏಕಾಂಗಿಯಾಗಿ ಹೋರಾಡಿದ ಡೆನಿಶ್ ದಾಸ್(೫೦, ೭೪ ಎಸೆತ, ೮ ಬೌಂಡರಿ) ಹೊರತಾಗಿ ಉಳಿದೆಲ್ಲ ಬ್ಯಾಟರ್‌ಗಳೂ ಅನುಭವಿ ಲೆಗ್ ಸ್ಪಿನ್ನರ್ ಹಾಗೂ ನಾಯಕ ಶ್ರೇಯಸ್ ಗೋಪಾಲ್(೪/೩೪) ಮತ್ತು ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ(೩೩) ಎದುರು ಒದ್ದಾಡಿದರು.

ಕರ್ನಾಟಕದ ಬೃಹತ್ ಮೊತ್ತ:
ಇದಕ್ಕೂ ಮೊದಲು ಬುಧವಾರ ಮುಂಜಾನೆ ತನ್ನ ಮೊದಲ ಸರದಿಯ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ ೧೩೩.೨ ಓವರ್‌ಗಳಲ್ಲಿ ೬ ವಿಕೆಟ್‌ಗಳಿಗೆ ೫೭೭ರ ಮೊತ್ತ ಸಂಪಾದಿಸಿ ಡಿಕ್ಲೇರ್ ಮಾಡಿಕೊಂಡಿತು.

ಮೂರನೇ ದಿನದ ಶತಕ ವೀರ ಕೆ.ವಿ. ಅನೀಶ(೧೪೫, ೨೫೪ ಎಸೆತ, ೧೦ ಬೌಂಡರಿ, ೨ ಸಿಕ್ಸರ್) ೫೦೨ ಸ್ಕೋರಿನಲ್ಲಿ ಔಟಾದರೆ, ಮತ್ತೊಮ್ಮೆ ಬ್ಯಾಟಿಂಗಿನಲ್ಲಿ ಭರ್ಜರಿಯಾಗಿ ಅಬ್ಬರಿಸಿದ ಮನ್ವಂತ್‌ಕುಮಾರ ೧೦೮ ಎಸೆತಗಳಲ್ಲಿ ೮ ಬೌಂಡರಿ ಹಾಗೂ ೫ ಸಿಕ್ಸರ್‌ಗಳಿದ್ದ ೧೦೦ ರನ್ ಸಿಡಿಸಿ ಔಟಾಗದೇ ಉಳಿದರು. ರಣಜಿ ಪಂದ್ಯಗಳಲ್ಲಿ ಇದು ಅವರಿಗೆ ಎರಡನೇ ಶತಕ. ರೋಶನ್ ಆಲಮ್(೩/೧೭೬) ಹಾಗೂ ಅಮ್ಲಾನ್‌ಜ್ಯೋತಿ ದಾಸ್(೨/೧೩೨) ಆಸ್ಸಾಂ ಪರ ಯಶಸ್ವಿ ಬೌಲರ್‌ಗಳು.

ಸಂಕ್ಷಿಪ್ತ ಸ್ಕೋರುಗಳು: ಅಸ್ಸಾಂ: ೪೮.೧ ಓವರ್‌ಗಳಲ್ಲಿ ೧೩೫ ಹಾಗೂ ೪೦.೨ ಓವರ್‌ಗಳಲ್ಲಿ ೧೨೮, ಕರ್ನಾಟಕ: ೧೩೩.೨ ಓವರ್‌ಗಳಲ್ಲಿ ೬ ವಿಕೆಟ್‌ಗಳಿಗೆ ೫೭೭ ಡಿಕ್ಲೇರ್ಡ್. ಫಲಿತಾಂಶ: ಕರ್ನಾಟಕಕ್ಕೆ ಇನ್ನಿಂಗ್ಸ್ ಹಾಗೂ ೩೧೪ ರನ್‌ಗಳ ಗೆಲುವು. ಪಾಯಿಂಟ್ಸ್: ಕರ್ನಾಟಕ-ಬೋನಸ್ ಸಹಿತ ೭, ಆಸ್ಸಾಂ-೦.


ಹಂಚಿಕೊಳ್ಳಿ

Leave a Reply

Your email address will not be published. Required fields are marked *